ಮಡಿಕೇರಿ ಜ.14 NEWS DESK : ಇತಿಹಾಸ ಪ್ರಸಿದ್ಧ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವರ 66ನೇ ವಾರ್ಷಿಕ ಜಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತ್ತಿದ್ದು, ಜ.16 ರಂದು ಮಹಾರಥೋತ್ಸವ ಜರುಗಲಿದೆ. ಬೆಳ್ಳಿ ಬಂಗಾರ ದಿನ ಆಚರಣೆಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿದೆ. ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಪ್ರಾರ್ಥನಾ ಪೂಜೆ ಮಾಡುವ ಮೂಲಕ ದೇವರ ಕೈಂಕರ್ಯಗಳಿಗೆ ಚಾಲನೆ ನೀಡಿದರು. ಮಕರ ಸಂಕ್ರಮಣ ಕರುವಿನ ಹಬ್ಬದ ಅಂಗವಾಗಿ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಬೆಳಗಿಸಲಾಗುತ್ತದೆ. ಇದರೊಂದಿಗೆ ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ, ಪ್ರಸಾದ ಸ್ವೀಕಾರ ನೆರವೇರಲಿದೆ. ಜ.15 ರಂದು ಅರಸು ಬಲ ಸೇವೆ, ಸಂಜೆ 7.30 ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿದೆ. ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಜ.15 ಹಾಗೂ 16 ರಂದು ಪುರುಷರ ಹಾಗೂ ಮಹಿಳೆಯರ ಅಂತರ್ ಜಿಲ್ಲಾ ಮಟ್ಟದ ಥ್ರೋಬಾಲ್, ಕಬ್ಬಡ್ಡಿ, ಹಗ್ಗಜಗ್ಗಾಟ ಮತ್ತು ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಜ.17 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ದೇವಾಲಯದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.