ಮಡಿಕೇರಿ ಜ.15 NEWS DESK : ಚಾಮರಾಜಪೇಟೆಯಲ್ಲಿ ದುರುಳರು ಹಾಲು ಕೊಡುವ ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿದ್ದು, ಈ ರಾಕ್ಷಸ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿರಿಯ ಸಹಕಾರಿ, ಕೃಷಿಕ ಹಾಗೂ ಗೋವು ಪ್ರಿಯ ಸೂದನ ಎಸ್.ಈರಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಂಧನಕ್ಕೊಳಗಾದ ಆರೋಪಿಯ ವಿರುದ್ಧ ಮತ್ತು ಒಟ್ಟು ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಮಗುವಿಗೆ ಹಾಲುಣಿಸುವ ತಾಯಿಯ ಸ್ಥಾನದಲ್ಲಿರುವ ಗೋಮಾತೆಯ ಮೇಲೆ ನಡೆದಿರುವ ಈ ದಾಳಿ ಇಡೀ ಮಾನವ ಸಮಾಜ ತಲೆ ತಗ್ಗಿಸುವಂತ್ತಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರಿಂದ ಭಾರೀ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದೂಗಳು ಅಮೃತ ಸಮಾನವಾದ ಹಾಲನ್ನು ನೀಡುವ ಗೋವುಗಳನ್ನು ಪೂಜಿಸುವ ಮೂಲಕ ಅವುಗಳಿಗೆ ಸಮಾಜದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ನೀಡಿದ್ದಾರೆ. ಹಸುಗಳ ಮೇಲೆ ಈ ರೀತಿಯ ಪೈಶಾಚಿಕ ಕೃತ್ಯ ನಡೆಯುವುದನ್ನು ಸಹಿಸಿಕೊಳ್ಳುವುದು ಅಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಸುವಿನ ಮಾಲೀಕರಿಗೆ ವೈಯುಕ್ತಿಕ ಪರಿಹಾರ ಅಥವಾ ಹಸುಗಳನ್ನು ನೀಡುವುದಾಗಿ ಸಚಿವ ಜಮೀರ್ ಅಹಮ್ಮದ್ ಅವರು ಭರವಸೆ ನೀಡಿದ್ದಾರೆ. ಈ ರೀತಿಯ ಪರಿಹಾರಗಳಿಂದ ನಡೆದಿರುವ ಹೇಯ ಕೃತ್ಯವನ್ನು ಸುಲಭವಾಗಿ ಬಿಡುವುದು ಸರಿಯಲ್ಲ. ಸಚಿವರು ಪರಿಹಾರ ನೀಡುವುದಕ್ಕೆ ಆದ್ಯತೆ ನೀಡುವ ಬದಲು ಕೃತ್ಯವೆಸಗಿದ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿ ಎಂದು ಸೂದನ ಎಸ್.ಈರಪ್ಪ ಒತ್ತಾಯಿಸಿದ್ದಾರೆ.