ಮಡಿಕೇರಿ ಜ.15 NEWS DESK : ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲುಗಳನ್ನು ಕತ್ತರಿಸಿ ಪೈಶಾಚಿಕ ಕೃತ್ಯವೆಸಗಿದ ಪ್ರಕರಣ ಅಮಾನವೀಯ ಮತ್ತು ಖಂಡನೀಯ. ಹಿಂದೂಗಳಿಗೆ ಮಾತೃ ಸಮಾನವಾದ ಗೋವುಗಳ ಮೇಲಿನ ದಾಳಿಯನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರ ಕಠಿಣ ಕಾನೂನು ಜಾರಿಗೆ ತರಬೇಕೆಂದು ಮಾನವ ಹಕ್ಕುಗಳ ಅಂತರಾಷ್ಟ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿರುವುದು ಅತ್ಯಂತ ಘೋರ ಕೃತ್ಯವಾಗಿದೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ದುಷ್ಕೃತ್ಯಕ್ಕೆ ಪ್ರೇರಣೆ ನೀಡುತ್ತಿರುವ ಶಕ್ತಿಗಳನ್ನು ಬಯಲಿಗೆಳೆಯಬೇಕೆಂದು ಆಗ್ರಹಿಸಿದ್ದಾರೆ. ಭೂಮಿಯ ಮೇಲೆ ಮನುಷ್ಯರಿಗಿರುವಷ್ಟೇ ಜೀವಿಸುವ ಹಕ್ಕು ಮೂಕ ಪ್ರಾಣಿಗಳಿಗೂ ಇದೆ. ಗೋವುಗಳ ಜೀವಿಸುವ ಹಕ್ಕನ್ನು ಕಸಿದುಕೊಳ್ಳುತ್ತಿರುವ ಕಿಡಿಗೇಡಿಗಳ ಕುಕೃತ್ಯ ಹಿಂದೂ ಸಮಾಜದ ಭಾವನೆಗೆ ದಕ್ಕೆ ತರುತ್ತಿದೆ. ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ಗೋವುಗಳ ಮೇಲಿನ ದಾಳಿ ಮಿತಿ ಮೀರುತ್ತಿದೆ. ಗೋವುಗಳ ಮೇಲೆ ದಾಳಿ ನಡೆಸುತ್ತಿರುವವರಿಗೆ ಕಾನೂನಿನ ಮೇಲೆ ಗೌರವ ಮತ್ತು ಭಯ ಇಲ್ಲದಾಗಿದೆ. ಕೊಡಗು ಜಿಲ್ಲೆಯಲ್ಲೂ ನಿರಂತರವಾಗಿ ಹಸುಗಳ ಕಳ್ಳತನ ಮತ್ತು ಸಾಗಾಟವಾಗುತ್ತಿದೆ. ಗೋಮಾಂಸ ರಾಜಾರೋಷವಾಗಿ ಮಾರಾಟವಾಗುತ್ತಿದ್ದು, ದುಷ್ಕರ್ಮಿಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸರಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಈ ಪ್ರಕರಣದಲ್ಲಿ ರಾಜಕಾರಣಿಗಳು ಮಧ್ಯ ಪ್ರವೇಶ ಮಾಡಬಾರದು ಎಂದು ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.