ಮಡಿಕೇರಿ ಜ.16 NEWS DESK : ಡಾ.ಗಂಗೂಬಾಯಿ ಹಾನಗಲ್ ಕಲೆ ಮತ್ತು ಸಾಹಿತ್ಯ ವಿಶ್ವವಿದ್ಯಾನಿಲಯದವರು ಮೈಸೂರು ಹಾಗೂ ಮಂಗಳೂರಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಹನ್ಸಿಕಾ ಪೊನ್ನಪ್ಪ ಸಾಧನೆ ಮಾಡಿದ್ದಾಳೆ. ಒಟ್ಟು 400 ಅಂಕಗಳಲ್ಲಿ 332 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ತೋರಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ. ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ಕೀರ್ತಿ ಲೇಔಟ್ ನ ನಿವಾಸಿ ಬೊವ್ವೇರಿಯಂಡ ಪ್ರತೀಶ್ ಪೊನ್ನಪ್ಪ ಮತ್ತು ಉಷಾ ಪೊನ್ನಪ್ಪ ದಂಪತಿಯ ಪುತ್ರಿಯಾಗಿರುವ ಹನ್ಸಿಕಾ ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದಲ್ಲಿ ಭರತನಾಟ್ಯ ಗುರುಗಳಾದ ವಿದ್ವಾನ್ ರಾಜೇಶ್ ಆಚಾರ್ಯ ಅವರ ಬಳಿಯಲ್ಲಿ ತಮ್ಮ 3ನೇ ವಯಸ್ಸಿನಿಂದ ಭರತನಾಟ್ಯ ಅಭ್ಯಾಸಮಾಡುತ್ತಿದ್ದಾಳೆ. ಮಗಳ ಸಾಧನೆಗೆ ಪೋಷಕರು ಹಾಗೂ ಕುಟುಂಬಸ್ಥರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.