ಮಡಿಕೇರಿ NEWS DESK ಜ.16 : ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಕಾರೊಂದರ ಮೇಲೆ ಕಾಡಾನೆ ದಾಳಿ ನಡೆಸಿ ಕಾರನ್ನು ಜಖಂ ಗೊಳಿಸಿರುವ ಘಟನೆ ತಿತಿಮತಿ ಸಮೀಪದ ಮಜ್ಜಿಗೆಹಳ್ಳ ಅರಣ್ಯ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಕಾಡಾನೆ ದಾಳಿಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಅಶ್ವಕ್ ಎಂಬವರು ಕುಟುಂಬ ಸಹಿತರಾಗಿ ರಾತ್ರಿ ವೇಳೆ ಕಾರಿನಲ್ಲಿ ತಿತಿಮತಿ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದರು. ತಿತಿಮತಿ ಮಜ್ಜಿಗೆ ಹಳ್ಳ ಅರಣ್ಯ ಪ್ರದೇಶದ ಸಮೀಪ ರಸ್ತೆ ಉಬ್ಬು ಇದ್ದ ಹಿನ್ನೆಲೆಯಲ್ಲಿ ಕಾರು ಚಾಲಕ ಅರ್ಫತ್ ವಾಹನದ ವೇಗವನ್ನು ಸಂಪೂರ್ಣವಾಗಿ ಕಡಿಮೆ ಮಾಡಿದ್ದಾರೆ. ಈ ವೇಳೆ ಕಾಡಾನೆ ಏಕಾಏಕಿ ಕಾರಿನ ಮೇಲೆ ದಾಳಿ ನಡೆಸಿ ಸಂಪೂರ್ಣ ಜಖಂಗೊಳಿಸಿ ಕಾಡಿನಲ್ಲಿ ಮರೆಯಾಗಿದೆ. ಈ ಘಟನೆಯಿಂದ ಅಶ್ವಕ್ ಕುಟುಂಬದ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮಾಹಿತಿ ಅರಿತು ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ರಾತ್ರಿ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು. ತಿತಿಮತಿ ಅರಣ್ಯ ಪ್ರದೇಶದ ರಸ್ತೆಯಲ್ಲಿರುವ ರಸ್ತೆ ಉಬ್ಬುಗಳನ್ನು ತೆರವು ಮಾಡಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ಆ ಮೂಲಕ ವನ್ಯಜೀವಿ ಸಂರಕ್ಷಣೆಯೊAದಿಗೆ ಮಾನವ ಜೀವದ ಅಪಾಯವನ್ನೂ ತಪ್ಪಿಸಬೇಕಿದೆ ಎಂದು ತಿಳಿಸಿದ್ದಾರೆ.