ಸುಂಟಿಕೊಪ್ಪ ಜ.21 NEWS DESK : ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಜಾರಿಗೆ ತಂದಿರುವ “ನಮ್ಮ ಶಾಲೆ-ನಮ್ಮ ಜವಾಬ್ದಾರಿ” ಕಾರ್ಯಕ್ರಮವನ್ನು ಪ್ರತಿ ಸರಕಾರಿ ಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘಗಳು ಕೈಗೆತ್ತಿಕೊಂಡು ಯಶಸ್ಸುಗೊಳಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೊಡಗು ಜಿಲ್ಲಾ ಉಪನಿರ್ದೇಶಕ ಸಿ.ರಂಗಧಾಮಪ್ಪ ಕರೆ ನೀಡಿದ್ದಾರೆ. ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಟನೆ ವತಿಯಿಂದ ಜಿ.ಯಂ.ಪಿ ಶಾಲಾ ಮೈದಾನದಲ್ಲಿ ನಡೆದ ಗುರು ಶಿಷ್ಯರ ಸಮ್ಮಿಲನ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಬದಲಾದ ಕಾಲಘಟ್ಟದಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಂಠಿತಗೊಳ್ಳುತ್ತಿದ್ದು, ದಾಖಲಾತಿ ಶೂನ್ಯ ಪ್ರಮಾಣಕ್ಕೆ ತಲುಪಿದರೆ ಅಂತಹ ಶಾಲೆಗಳನ್ನು ಅನಿವಾರ್ಯವಾಗಿ ಮುಚ್ಚಬೇಕಾಗುತ್ತದೆ. ಆದರೆ ಇತ್ತೀಚಿಗೆ ಸರಕಾರಿ ಶಾಲೆಗಳು ಖಾಸಗಿ ಶಿಕ್ಷಣಕ್ಕಿಂತ ಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ದಾಖಲಿಸುತ್ತಿವೆ ಎಂದರು. ಸುಂಟಿಕೊಪ್ಪದ 3 ಸರಕಾರಿ ಶಿಕ್ಷಣ ಸಂಸ್ಥೆಗಳು ಒಂದಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಒಂದು ಅನುಕರಣೀಯ ಮಾದರಿ ಎಂದು ಶ್ಲಾಘಿಸಿದ ರಂಗದಾಮಯ್ಯ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಹಳೆಯ ವಿದ್ಯಾರ್ಥಿಗಳ ಸಹಕಾರ ಮಾರ್ಗದರ್ಶನ ಪಡೆದು ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬುದನ್ನು ಕೃತಿರೂಪದಲ್ಲಿ ತರಬೇಕೆಂದು ಕಿವಿ ಮಾತು ಹೇಳಿದರು. ಶಾಲೆಯ ಹಿರಿಯ ನಿವೃತ್ತ ಶಿಕ್ಷಕರಾದ ಲತಾ ಮಾತನಾಡಿ, ಯಾರು ಪ್ರೀತಿಸ ಬಲ್ಲರೋ ಅವರು ಮಾತ್ರ ತಿದ್ದುವ ಮತ್ತು ಶಿಕ್ಷಿಸುವ ಅಧಿಕಾರವನ್ನು ಹೊಂದಿರುತ್ತಾರೆ ಈ ಮಾತು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಕ್ಕೆ ಅನ್ವಯಿಸುತ್ತದೆ ಎಂದು ಹೇಳಿದ ಅವರು ಜೀವನದಲ್ಲಿ ಎಲ್ಲಾವನ್ನು ಎದುರಿಸಿ ತಾಳ್ಮೆ ಮತ್ತು ವಿವೇಚನೆಯಿಂದ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಖಾಸಗಿ ಶಿಕ್ಷಣ ಪಡೆದ ಮಕ್ಕಳಿಗಿಂತ ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಹೆಚ್ಚು ಜೀವನ ಕೌಶಲ್ಯಗಳನ್ನು ಹೊಂದಿರುತ್ತಾರೆ ಎಂದು ಹೇಳಿದರು. ನಿವೃತ್ತ ಉಪನ್ಯಾಸಕ ಮಂಜುನಾಥ್ ಮಾತನಾಡಿ 96-97 ಸಾಲಿನಲ್ಲಿ ಪದವಿ ಪೂರ್ವ ಕಾಲೇಜು ಪ್ರಾರಂಭವಾದಾಗ ಕೇವಲ 16 ರಿಂದ 18 ಮಕ್ಕಳು ಇದ್ದ ದಿನಗಳನ್ನು ನೆನಪಿಸಿಕೊಂಡರು. ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಾಲಕೃಷ್ಣ, ಶಾಲಾ ಶಿಕ್ಷಕ ಪ್ರಕಾಶ್ ಮಾತನಾಡಿದರು. ಸರಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘಟನೆಯನ್ನು ರಚಿಸಿ ಸುನಿಲ್ ಅವರ ಮುಂದಾಳತ್ವದಲ್ಲಿ ಆರ್.ಹೆಚ್.ಶರೀಫ್, ರಜಾಕ್, ಉಸ್ಮಾನ್, ಮಹೇಂದ್ರ, ಅಬ್ದುಲ್ ಅಜೀಜ್, ಅನಿಲ್‍ಕುಮಾರ್, ಸಂದೀಪ್, ಮಹಮ್ಮದ್ ಆಲಿ, ಅರುಣ್‍ಕುಮಾರ್, ಬಿ.ಕೆ.ಮೋಹನ್, ಧನುಕಾವೇರಪ್ಪ, ಬಿ.ಕೆ.ಶಶಿಕುಮಾರ್‍ರೈ, ಕಮಲಹಾಸನ್, ಮಿಥುನ್, ಉಮ್ಮರ್ ಮತ್ತಿತರರು ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.