ಮಡಿಕೇರಿ ಜ.21 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣ ಅವರು ಸೇರಿದಂತೆ ಎಲ್ಲಾ ವಚನಕಾರರ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತಾಗಬೇಕು. ಅಂಬಿಗರ ಚೌಡಯ್ಯ ಅವರು ಸಮಾಜಕ್ಕೆ ನೀಡಿರುವ ಸುಧಾರಣೆ ಮತ್ತು ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿದರು. ಗಾಳಿಬೀಡು ನವೋದಯ ವಸತಿ ಶಾಲೆಯ ಉಪನ್ಯಾಸಕ ಮಾರುತಿ ದಾಸಣ್ಣವರ್ ಮಾತನಾಡಿ, ಜಗತ್ತಿನಲ್ಲಿ ಮೊದಲ ಬಾರಿಗೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ ಎಂದು ಬಣ್ಣಿಸಿದರು. ಸಮಾಜದಲ್ಲಿನ ಮೌಢ್ಯಗಳನ್ನು ಹೋಗಲಾಡಿಸಿ ಸಮಾನತೆಯ ಆಂದೋಲನವನ್ನೇ ಹುಟ್ಟು ಹಾಕಿದ ನಿಜ ಚಳುವಳಿ ಎಂದರೆ ಅದು ವಚನ ಚಳುವಳಿ ಎಂದು ಮಾರುತಿ ದಾಸಣ್ಣವರ್ ವರ್ಣಿಸಿದರು. ಹನ್ನೆರಡನೇ ಶತಮಾನದಲ್ಲಿ ಬಂದ ಶರಣರು ಭಾಷಿಕವಾಗಿ, ಧಾರ್ಮಿಕವಾಗಿ, ತಾತ್ವಿಕವಾಗಿ, ಸಾಮಾಜಿಕವಾಗಿ ಬಹಳ ಅಪರೂಪದ ಕ್ರಾಂತಿಯನ್ನೇ ಮಾಡಿದರು. ಬಸವಣ್ಣನವರ ನೇತೃತ್ವದಲ್ಲಿ ಅವರು ಹುಟ್ಟು ಹಾಕಿದ ಮಹಾಮನೆ, ದಾಸೋಹ, ಇಷ್ಟಲಿಂಗ, ಕಾಯಕದಂತಹ ಪರಿಕಲ್ಪನೆಗಳು ಜಗತ್ತಿನ ಯಾವ ಗ್ರಂಥದಲ್ಲೂ ಸಿಗುವುದಿಲ್ಲ. ಅವರು ತಮ್ಮ ಅಂತರಂಗವನ್ನು ಶುದ್ಧಗೊಳಿಸುತ್ತ ಸಮಾಜವನ್ನು ತಿದ್ದಿದವರು ಎಂದು ನುಡಿದರು. ಶತಶತಮಾನಗಳಿಂದಲೂ ಹತ್ತಾರು ರೀತಿಯ ಮೌಢ್ಯಗಳನ್ನು ಹೊತ್ತು ನಲುಗುತ್ತಿದ್ದ ಸಮಾಜಕ್ಕೆ ವೈಚಾರಿಕತೆಯನ್ನು ಕೊಟ್ಟ ಕ್ರಾಂತಿವೀರರು ನಮ್ಮ ಶರಣರು. ಅಂತಹ ಕ್ರಾಂತಿಕಾರಿ ಶರಣರಲ್ಲಿ ಎದ್ದು ಕಾಣುವ ಹೆಸರು ಅಂಬಿಗರ ಚೌಡಯ್ಯನವರು ಎಂದು ಮಾರುತಿ ದಾಸಣ್ಣವರ್ ವಿವರಿಸಿದರು. ಅಂಬಿಗ ಎನ್ನುವ ಪರಿಕಲ್ಪನೆಯೇ ಬಹಳ ವಿಶೇಷವಾದುದು. ಅದು ಹೊಳೆಯನ್ನು ದಾಟಿಸುವ ಅಣ್ಣನೊಬ್ಬನ ಉಪಕಾರ. ಹಾಗೆಯೇ ಭವದ ಹೊಳೆಯನ್ನು ದಾಟಿಸಿ ಸುರಕ್ಷಿತವಾದ ದಡವನ್ನು ಸೇರಿಸುವ ಯೋಗಿಯೊಬ್ಬನ ತಾತ್ವಿಕ ಅನುಸಂಧಾನವೂ ಹೌದು. ಅಂಬಿಗ ನಾ ನಿನ್ನ ನಂಬಿದೆ ಎನ್ನುವಲ್ಲಿ ನಂಬುವವರನ್ನು ದಡ ಸೇರಿಸುವ ಉಪಕಾರಿಯಾಗಿ ಕಾಣುವ ಈ ಕಲ್ಪನೆ ನಮ್ಮ ದೇಶದಲ್ಲಿ ಬಹಳ ವಿಶಿಷ್ಟವಾದುದು. ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು, ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ ಎಂದು ಹೇಳುತ್ತಾರೆ ಎಂದು ನುಡಿದರು. ತಳ ಸಮುದಾಯದವರು ತಮ್ಮ ಜಾತಿಯನ್ನು ಹೇಳಿದರೆ ಎಲ್ಲಿ ಜನ ನಮ್ಮನ್ನು ಕೀಳಾಗಿ ಕಾಣುವರೋ ಎಂಬ ಅಳುಕಿನಲ್ಲಿರುವ ಇಂದಿನ ದಿನಮಾನಗಳಲ್ಲೂ ಈ ಜಾತಿಯ ಕೀಳರಿಮೆ ದೂರವಾಗಿಲ್ಲವೆಂಬುದು ನಮ್ಮ ಬಹು ದೊಡ್ಡ ದುರಂತ. ಆದರೆ ಅಂದು ಪ್ರತಿಯೊಬ್ಬ ಶರಣರೂ ತನ್ನ ಜಾತಿಯನ್ನು ತನ್ನ ಹೆಸರಿಗಿಂತ ಮೊದಲು ಇಟ್ಟುಕೊಂಡು ತನ್ನ ಜಾತಿಯನ್ನು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದ. ಇದು ನಿಜಕ್ಕೂ ಸೋಜಿಗವೇ ಎಂದರು. ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆಯವರೆಗೂ ತಮ್ಮ ವೃತ್ತಿಗಳನ್ನು ಹೇಳಿಕೊಳ್ಳುವ ಈ ಪರಂಪರೆ ಎಷ್ಟೊಂದು ಅದ್ಭುತ ಎಂದು ಮಾರುತಿ ದಾಸಣ್ಣವರ್ ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿದೇಶಕರಾದ ಮಂಜುಳ ಮಾತನಾಡಿ, ಅಂಬಿಗರ ಚೌಡಯ್ಯ ಅವರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಹೇಳಿದರು. ತಹಶೀಲ್ದಾರ್ ಪ್ರವೀಣ್ ಕುಮಾರ್, ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯರಾದ ಅನಸೂಯ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಬಿಸಿಎಂ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್, ಶಿಕ್ಷಕರಾದ ಮಂಗಳಗೌರಿ, ಶುಭ, ಮಣಜೂರು ಮಂಜುನಾಥ್ ಇತರರು ಇದ್ದರು.