ಮಡಿಕೇರಿ NEWS DESK ಜ.30 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ವಾಹನ ನೀಡಿ ಸಹಕರಿಸಿದ ಆರೋಪದಡಿ ಇಬ್ಬರ ವಿರುದ್ಧ ಕೊಡಗು ಪೊಲೀಸ್ ಪ್ರಕರಣ ದಾಖಲಿಸಿದೆ ಮತ್ತು ಎರಡು ವಾಹನಗಳನ್ನು ವಶಕ್ಕೆ ಪಡೆದಿದೆ. ವಿರಾಜಪೇಟೆ ತಾಲ್ಲೂಕಿನ ಕಾವಾಡಿ ಗ್ರಾಮದ ನೆಲ್ಲಮಕ್ಕಡ ಎಂ.ಶಿವಪ್ಪ (50) ಹಾಗೂ ಮೈತಾಡಿ ಗ್ರಾಮದ ಬೋಳ್ಯಪಂಡ ಎಂ.ಭೀಮಯ್ಯ (38) ಎಂಬುವವರ ವಿರುದ್ಧ ಆರೋಪಿಗಳಿಗೆ ಸಹಕರಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ತಪ್ಪಿಸಿಕೊಳ್ಳಲು ಬಳಕೆಯಾದ ಆರೋಪದಡಿ ನೆಲ್ಲಮಕ್ಕಡ ಎಂ.ಶಿವಪ್ಪ ಅವರ ಮಾರುತಿ ಕಾರು ಮತ್ತು ಅಪರಾಧ ಕೃತ್ಯಕ್ಕೆ ಬಳಸಿದ ಆರೋಪದಡಿ ಬೋಳ್ಯಪಂಡ ಎಂ.ಭೀಮಯ್ಯ ಅವರ ಬೋಲೆರೋ ವಾಹನವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಮಡಿಕೇರಿ ಡಿವೈಎಸ್ಪಿ ಸೂರಜ್.ಪಿ.ಎ, ಪಿಐ ಚಂದ್ರಶೇಖರ್ ಹೆಚ್.ವಿ, ಗ್ರಾಮಾಂತರ ಠಾಣೆಯ ಪಿಎಸ್ಐ ಶ್ರೀನಿವಾಸ, ಮಡಿಕೇರಿ ಸಂಚಾರಿ ಠಾಣೆಯ ಪಿಎಸ್ಐ ಎನ್.ಟಿ.ತಮ್ಮಯ್ಯ, ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್ಬಿ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತನಿಖಾ ತಂಡ ತನಿಖೆ ಕೈಗೊಂಡು ಹಲ್ಲೆ ಮಾಡಿರುವ ಆರೋಪಿಗಳು ತಲೆಮರೆಸಿಕೊಳ್ಳಲು ಸಹಾಯ ಮಾಡಿರುವ ಆರೋಪದಡಿ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ::: ಮಾಹಿತಿ ನೀಡಿ ::: ಹಲ್ಲೆ ಪ್ರಕರಣದ ಆರೋಪಿ ಅನಿಲ್ ಹಾಗೂ ಸಹಚರರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಯಾವುದೇ ರೀತಿಯಲ್ಲಿ ಸಹಾಯ ಮಾಡಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆರೋಪಿಗಳ ಅಥವಾ ಆರೋಪಿಗಳಿಗೆ ಸಹಾಯ ಮಾಡುವವರ ಕುರಿತು ಮಾಹಿತಿ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂ 08272 228330, 9480804900