ವಿರಾಜಪೇಟೆ ಫೆ.5 NEWS DESK : ಮಾನವ ತನ್ನ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಎದುರಿಸುತ್ತಾನೆ. ಕೊನೆಯಲ್ಲಿ ಜೀವನದಲ್ಲಿ ಪಡೆದ ಎಲ್ಲಾ ಲೌಕಿಕ ವಸ್ತುಗಳನ್ನು ತ್ಯಜಿಸಿ ಇಹಲೋಕಕ್ಕೆ ಸಾಗುತ್ತಾನೆ. ಈ ಸಂದರ್ಭ ಆತನ ಮಾನವೀಯ ಸೇವೆಗಳು ಮಾತ್ರ ಅಜರಾಮರವಾಗಿ ಉಳಿಯುತ್ತದೆ ಎಂದು ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ರೆ.ಫಾ. ಜೇಮ್ಸ್ ಡೊಮಿನಿಕ್ ಅಭಿಮತ ವ್ಯಕ್ತಪಡಿಸಿದರು. ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದಿಂದ ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‌ನ ದ್ವಿ ಶತಮಾನೋತ್ಸವ ಸಭಾಂಗಣದಲ್ಲಿ ಫ್ರೀಜರ್ (ಮೃತದೇಹ ಸಂರಕ್ಷಿಸುವ ಶೀತಲೀಕರಣ ಪೆಟ್ಟಿಗೆ) ಮತ್ತು ಅಂತಿಮ ಕ್ರಿಯೆಗೆ ಬೇಕಾಗುವ ಪರಿಕರಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು, ಮಾನವೀಯ ಗುಣಗಳನ್ನು ಹೊಂದಿರುವವನೆ ನಿಜವಾದ ಮನುಜನಾಗಿರುತ್ತಾನೆ. ದೇಹ ತ್ಯಜಿಸಿ ಇಹಲೋಕದ ಯಾತ್ರೆಗೆ ತೆರಳುವವನ ಕ್ರಿಯೆಗಳು ಮಾನವೀಯ ನೆಲೆಯಲ್ಲಿ ಗೌರವಪೂರ್ವಕವಾಗಿರಬೇಕು. ಈ ನಿಟ್ಟಿನಲ್ಲಿ ಸ್ನೇಹಿತರ ಸಂಘದ ಸದಸ್ಯರು ದಾನಿಗಳ ನೆರವಿನಿಂದ, ಮೃತ ದೇಹವನ್ನು ಸಂರಕ್ಷಿಸುವ ಫ್ರೀಜರ್ ಮತ್ತು ಅಂತಿಮ ಕ್ರಿಯೆಗೆ ಬೇಕಾಗುವ ಪರಿಕರಗಳನ್ನು ನೀಡಿದ್ದಾರೆ. ಸಂಘವು ಸಮುದಾಯದ ಬಡ ಮಂದಿಗೆ ಇದನ್ನು ಉಚಿತವಾಗಿ ನೀಡುವಂತಾಗಬೇಕು ಎಂದರು. ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ವ್ಯವಸ್ಥಾಪಕರು ಮತ್ತು ಚರ್ಚ್ ಸಹಾಯಕ ಧರ್ಮ ಗುರುಗಳಾದ ರೆ.ಫಾ. ಮುದಲೈಮುತ್ತು ಅವರು ಸಂಘದ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿ, ಮಾನವೀಯ ತಳಹದಿಯಲ್ಲಿ ಮನುಷ್ಯನ ಅಂತಿಮ ಕ್ರಿಯೆಗೆ ಬೇಕಾಗುವ ಪರಿಕರಗಳನ್ನು ಖರೀದಿಸಿ ಜನಾಂಗ ಬಾಂಧವರ ನೆರವಿಗೆ ಬಂದಿರುವುದು ಸೇವಾ ಮಾನೋಭಾವದ ಪ್ರತೀಕವಾಗಿದೆ ಎಂದರು. ಸಂಘದ ಮಾಜಿ ಅಧ್ಯಕ್ಷರಾದ ಜ್ಯೂಡಿ ವಾಜ್ ಮಾತನಾಡಿ, ಸಂಘವು ಸ್ಥಾಪನೆಯಾಗಿ ಸುಮಾರು 14 ವರ್ಷಗಳು ಕಳೆದಿವೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕ್ರೀಡೆಗಳನ್ನು ಅಯೋಜಿಸಿಕೊಂಡು ಬಂದಿದೆ. 2024 ರಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉಳಿತಾಯವಾದ ಹಣದಲ್ಲಿ ಮತ್ತು ದಾನಿಗಳ ನೆರವಿನಿಂದ ಫ್ರೀಜರ್ ಮತ್ತು ಅಂತಿಮ ಕ್ರಿಯೆಗೆ ಬೇಕಾಗುವ ಗುದ್ದಲಿ, ಹಾರೆ, ಕುರ್ಚಿಗಳು, ಟೇಬಲ್, ಪರದೆ ಪರಿಕರಣಗಳನ್ನು ಖರೀದಿಸಲಾಗಿದೆ. ಇದು ಕೊಡಗು ಜಿಲ್ಲೆಯ ಧರ್ಮ ಕೇಂದ್ರದಲ್ಲಿ ಪ್ರಥಮವಾಗಿದೆ. ಫ್ರೀಜರ್‌ನ ನಿರ್ವಹಣಾ ವೆಚ್ಚಕ್ಕಾಗಿ 2 ಸಾವಿರ ರೂ. ನಿಗದಿಗೊಳಿಸಲಾಗಿದೆ. ಜಾತಿ ಮತ ಭೇದವಿಲ್ಲದೆ ಇದನ್ನು ನೀಡಲಾಗುತ್ತದೆ ಎಂದು ಹೇಳಿದರು. ಸಮುದಾಯದ ಪ್ರಮುಖರಾದ ಮಾರ್ಟಿನ್ ಬರ್ನಾಡ್, ಜೋಫಿ ಜೋಸೆಫ್, ಜೋಕಿಂ ರೊಡ್ರಿಗಸ್, ಬೆನಿಡಿಕ್ಟ್ ಸಾಲ್ದಾನಾ, ಎ.ಸಿ.ಜಾನ್ಸನ್ ಮತ್ತು ಸಂಘದ ಅಧ್ಯಕ್ಷರಾದ ಜಾನ್ಸನ್ ಡಿಸೋಜಾ ಉಪಸ್ಥಿತರಿದ್ದರು. ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಪದಾಧಿಕಾರಿಗಳು, ಧರ್ಮ ಕೇಂದ್ರದ ಪ್ರಮುಖರು ಹಾಗೂ ದೇವಾಲಯಕ್ಕೆ ಆಗಮಿಸಿದ ಜನಾಂಗ ಬಾಂಧವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ











