![](https://newsdeskkannada.com/wp-content/uploads/2025/02/Z-ND-ADVT-16.jpg)
![](https://newsdeskkannada.com/wp-content/uploads/2025/02/Z-ADVT-TEACHERS-10.jpg)
![](https://newsdeskkannada.com/wp-content/uploads/2025/02/Z-SRI-SAI-INSURENCE-8.jpg)
ಮಡಿಕೇರಿ ಫೆ.15 NEWS DESK : ವಿಶಿಷ್ಟ ಸಂಸ್ಕೃತಿ, ಪರಂಪರೆಗಳನ್ನು ಹೊಂದಿ ಕೊಡಗಿನ ನೆಲದಲ್ಲಿ ಸಹಸ್ರಾರು ವರ್ಷಗಳಿಂದ ಬದುಕಿ ಬಾಳುತ್ತಿರುವ ‘ಕುಡಿಯ’ ಸಮುದಾಯವನ್ನು ಅಲೆಮಾರಿಗಳೆನ್ನದೆ, ಆದಿವಾಸಿಗಳ ಪಟ್ಟಿಗೆ ಸೇರಿಸಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಿಗೆ ಕುಡಿಯ ಸಮುದಾಯದ ಪ್ರಮುಖರು ಮನವಿ ಮಾಡಿದರು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳ ಅಹವಾಲುಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾದ ಜಿ.ಪಲ್ಲವಿ ಅವರು ಸ್ವೀಕರಿಸಿದರು. ಈ ಸಂದರ್ಭ ಕುಡಿಯ ಸಮುದಾಯದ ಪ್ರಮುಖರಾದ ಕುಡಿಯರ ಮುತ್ತಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕುಡಿಯ ಜನಾಂಗಕ್ಕೆ 5 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಆದ್ದರಿಂದ ಕುಡಿಯ ಸಮುದಾಯವನ್ನು ಅಲೆಮಾರಿಗಳೆಂದು ಹೇಳದೆ ಆದಿವಾಸಿಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ನಿಗಮದ ವಿಶೇಷ ಕರ್ತವ್ಯ ಅಧಿಕಾರಿ ಆನಂದ್ ಕುಮಾರ್, ಸೂಕ್ಷ್ಮ, ಸಣ್ಣ ಸಣ್ಣ ಸಮುದಾಯಗಳನ್ನು ಅಲೆಮಾರಿಗಳೆಂದು ಗುರುತಿಸಲಾಗಿದೆಯಷ್ಟೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲವೆಮದು ಸ್ಪಷ್ಟ ಪಡಿಸಿದರು. ಕೆ.ಕೆ.ದೇವಪ್ಪ ಎಂಬವರು ಮಾತನಾಡಿ ಅಜಿಲ-ನಲಿಕೆ ಸಮಾಜವು ಸಂಪಾಜೆ, ಚೆಂಬು, ಜೋಡುಪಾಲ, ವಿರಾಜಪೇಟೆ ವ್ಯಾಪ್ತಿಯಲ್ಲಿ ಬರಲಿದ್ದು, ಸಣ್ಣ ಸಮುದಾಯವಾಗಿದೆ. ಈ ಸಮುದಾಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯರಾದ ಹೆಚ್.ಎಸ್.ಮುತ್ತಪ್ಪ ಅವರು ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಮೊಗೇರ ಸಮಾಜದವರು ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದು, ಪಾಲೆ ಸಮಾಜದವರಿಗೆ ಪಾಲೆ ಸಮಾಜದವರು ಮತ್ತು ಮೊಗೇರ ಸಮಾಜದವರಿಗೆ ಮೊಗೇರ ಎಂದು ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿದರು. ಕುಶಾಲನಗರದ ಸುಂದರನಗರದಲ್ಲಿ ಜೇನುಕುರುಬ ಸಮಾಜದವರು ಹಲವು ದಶಕಗಳಿಂದ ವಾಸ ಮಾಡುತ್ತಿದ್ದು, ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು. ಅಹವಾಲು ಆಲಿಸಿ ಮಾತನಾಡಿದ ಜಿ.ಪಲ್ಲವಿ, ಕೊಡಗು ಜಿಲ್ಲೆಗೆ ಮತ್ತೆ ಭೇಟಿ ನೀಡಲಾಗುವುದು. ಭೂ ಪ್ರದೇಶ ವಿಶಾಲವಾಗಿದ್ದು, ಇನ್ನೂ ಹೆಚ್ಚಿನ ಹಾಡಿಗಳಿಗೆ ಭೇಟಿ ನೀಡಿ ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗುವುದು ಎಂದರು. ಈಗಾಗಲೇ ರಾಜ್ಯದ 17 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಅಲೆಮಾರಿ ಸಮಾಜಗಳಿಗೆ ಆದಷ್ಟು ಸರ್ಕಾರದ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಸೂಕ್ಷ್ಮ, ಸಣ್ಣ ಸಣ್ಣ ಸಮಾಜಗಳನ್ನು ಗುರುತಿಸಿ ಅವರ ಕುಂದುಕೊರತೆಗಳನ್ನು ಆಲಿಸಲು ಖುದ್ದು ಭೇಟಿ ನೀಡಲಾಗುತ್ತದೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ, ಸಿದ್ದೇಗೌಡ, ಪ್ರೀತಿ ಚಿಕ್ಕಮಾದಯ್ಯ, ತೇಜಕುಮಾರ ಮತ್ತಿತರರು ಇದ್ದರು.