
ಮಡಿಕೇರಿ ಮಾ.1 NEWS DESK : ನಗರದ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಕ್ಲಬ್ ಮಹೀಂದ್ರ ರೆಸಾರ್ಟ್ ಸಹಯೋಗದಲ್ಲಿ ನಗರದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಯ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸಪ್ತಾಹಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿಗಳು ಭಿತ್ತಿ ಫಲಕ ಹಿಡಿದು, ಘೋಷಣೆ ಕೂಗುತ್ತ ಸಂಚಾರಿ ಅರಿವು ಮೂಡಿಸಿದರು. ಜ.ತಿಮ್ಮಯ್ಯ ವೃತ್ತದಿಂದ ಇಂದಿರಾಗಾಂಧಿ ವೃತ್ತದ ತನಕ ಜಾಥಾ ನಡೆಯಿತು. ಅನಂತರ ಮೈತ್ರಿ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಈ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಅವಘಡಗಳು ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದೆ. ಇದರೊಂದಿಗೆ ಮದ್ಯ ಸೇವಿಸಿ ವಾಹನ ಚಲಾಯಿಸುವ ಪ್ರಕರಣಗಳು ಅಧಿಕವಾಗುತ್ತಿವೆ. ಈ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‍ರಾಜ್, ಪ್ರೊಬೆಷನರಿ ಎಸ್.ಪಿ.ಡಾ.ಬೆನಕ ಪ್ರಸಾದ್, ಫೀ.ಮಾ.ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಮೇ.ಬಿ.ರಾಘವ, ನಗರ ವೃತ್ತ ನಿರೀಕ್ಷಕ ಪಿ.ಕೆ.ರಾಜು, ನಗರ ಉಪನಿರೀಕ್ಷಕ ಶ್ರೀಧರ್ ಸೇರಿದಂತೆ ಇನ್ನಿತರರು ಹಾಜರಿದ್ದರು.











