


ಮಡಿಕೇರಿ NEWS DESK ಮಾ.9 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 16ನೇ ಬಜೆಟ್ ಜನಸಾಮಾನ್ಯರ ಪರವಾಗಿದೆ. ಆದರೆ ಬಿಜೆಪಿ ಇದನ್ನು ಅಲ್ಪಸಂಖ್ಯಾತರ ಬಜೆಟ್ ಎಂದು ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಹೆಚ್.ಯು.ಇಸಾಕ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಸರ್ಕಾರದ ಬಜೆಟ್ ಕೊಡಗು ಜಿಲ್ಲೆಗೂ ವರದಾನವಾಗಿದ್ದು, ಇಬ್ಬರು ಶಾಸಕರ ಪ್ರಯತ್ನದಿಂದ ಆರೋಗ್ಯ, ಶಿಕ್ಷಣ ಕ್ಷೇತ್ರ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ದೊಡ್ಡ ಪ್ರಮಾಣದ ಅನುದಾನ ಘೋಷಣೆಯಾಗಿದೆ. ಜನಪರ ಕಾಳಜಿ ವಹಿಸಿರುವ ಶಾಸಕದ್ವಯರು ಅಭಿನಂದನಾರ್ಹರು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಪ್ರತಿ ಜಿಲ್ಲೆಯ ಮೇಲೂ ಹೆಚ್ಚಿನ ಕಾಳಜಿ ತೋರಿ ಸರ್ವಜನರ ಏಳಿಗೆಗಾಗಿ ಸಮಾನ ಅನುದಾನ ಹಂಚಿಕೆ ಮಾಡಿದ್ದಾರೆ. ಬಜೆಟ್ ಗಾತ್ರದಲ್ಲಿ ಕೇವಲ ಶೇ.1 ರಷ್ಟು ಅನುದಾನ ಮಾತ್ರ ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ. ಆದರೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿ ಇದು ಅಲ್ಪಸಂಖ್ಯಾತರ ಬಜೆಟ್ ಎಂದು ಪ್ರತಿಬಿಂಬಿಸಿ ರಾಜಕೀಯ ಲಾಭ ಪಡೆಯುವ ಯತ್ನ ಮಾಡುತ್ತಿದೆ. ಅಲ್ಲದೆ ಜಾತಿ, ಧರ್ಮದ ಹೆಸರಿನಲ್ಲಿ ಮುಖ್ಯಮಂತ್ರಿಗಳನ್ನು ತೇಜೋವಧೆ ಮಾಡುವ ಮತ್ತು ಸಮಾಜದಲ್ಲಿ ಒಡಕು ಮೂಡಿಸುವ ಕ್ಷÄಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದರೂ ಬಿಜೆಪಿ ಮಂದಿ ವಿನಾಕಾರಣ ಟೀಕೆ ಮಾಡುವ ಮೂಲಕ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶಕ್ಕಾಗಿ ಟೀಕೆ ಮಾಡುವುದನ್ನು ಬಿಟ್ಟು ಶಾಸಕದ್ವಯರು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಲಿ ಎಂದು ಇಸಾಕ್ ಖಾನ್ ಒತ್ತಾಯಿಸಿದ್ದಾರೆ.