


ಮಡಿಕೇರಿ ಮಾ.10 NEWS DESK : ಕಲೆ, ಸಾಹಿತ್ಯ, ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕರುನಾಡ ಕನ್ನಡ ಕಲಾ ಸಿರಿ ಬಳಗ ಹಾಗೂ ಎಜಿಎಸ್ ಚಾರಿಟೇಬಲ್ ಟ್ರಸ್ಟ್ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಕೊಡಗಿನ ಪತ್ರಕರ್ತ ಪ್ರಶಾಂತ್.ಟಿ.ಆರ್ ವಿರಚಿತ ಹೊನ್ನಮ್ಮನ ಕನಸು ಕಾದಂಬರಿಗೆ ಅತ್ಯುತ್ತಮ ಕಾದಂಬರಿ ಪ್ರಶಸ್ತಿ ಲಭಿಸಿದೆ. ಹಳ್ಳಿಯ ವೃದ್ದ ಮಹಿಳೆಯೊಬ್ಬಳ ಮಾನಸಿಕ ತೊಳಲಾಟದ ಜೊತೆಗೆ ಸಾಮಾಜಿಕ ಕಳಕಳಿಯೂ ಈ ಕಾದಂಬರಿಯ ಕಥಾ ವಸ್ತುವಾಗಿದೆ. ವಿಶೇಷ ಎಂದರೆ ಈ ಕಾದಂಬರಿಯನ್ನು ಮೆಚ್ಚಿದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ಬೆನ್ನುಡಿ ಬರೆದಿದ್ದಾರೆ. ಪ್ರಶಾಂತ್ ಅವರು ವಿಶ್ವವಾಣಿ ಪತ್ರಿಕೆಯಲ್ಲಿ ಸಿನಿಮಾ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಕೆಲವು ಸಿನಿಮಾಗಳಲ್ಲಿಯೂ ನಟಿಸುವ ಮೂಲಕ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಏ.13 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‍ನ ಶ್ರೀಕೃಷ್ಣರಾಜ ಸಭಾಂಗದಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರಾಜ್ಯದ ವಿವಿಧ ಸಾಧಕರು, ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.