


ಪೊನ್ನಂಪೇಟೆ ಮಾ.12 NEWS DESK : ಪಠ್ಯೇತರ ಚಟುವಟಿಕೆಗಳ ಭಾಗವಾಗಿ ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ಎಂ.ಕಾಂ. ವಿಭಾಗದ ವಿದ್ಯಾರ್ಥಿಗಳು ವಿರಾಜಪೇಟೆ ಸಮೀಪದ ಹೆಗ್ಗಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದರು. ಸಂತ ಅನ್ನಮ್ಮ ಪದವಿ ಕಾಲೇಜಿನ ಎಂ.ಕಾಂ.ವಿಭಾಗದ ಉಪನ್ಯಾಸಕರೊಂದಿಗೆ ಶಾಲೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಪ್ರಾಥಮಿಕ ಹಂತದ ವಿದ್ಯಾರ್ಥಿಗಳೊಂದಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲ್ತೋಡು ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಉದ್ಘಾಟಿಸಿದರು. ಎಂ.ಕಾಂ. ವಿದ್ಯಾರ್ಥಿಗಳ ಭೇಟಿಯ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಲ್ಲದೆ, ಶಾಲೆಯ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಫಿಲ್ಟರ್, ನೋಟ್ ಬುಕ್, ಜಾಮಿಟ್ರಿ ಬಾಕ್ಸ್, ತಟ್ಟೆ ಮತ್ತು ಲೋಟಗಳನ್ನು ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ಇದೇ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕ ಪೂಜ, ದೃಶ್ಯ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು, ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಡಿ.ಎ.ಕಮರುನ್ನೀಸ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ಕಮಲಮ್ಮ ವಂದಿಸಿದರು.