



ಕುಶಾಲನಗರ ಮಾ.18 NEWS DESK : ವೇಗವಾಗಿ ಬೆಳೆಯುತ್ತಿರುವ ಔದ್ಯೋಗಿಕ ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ನಮ್ಮ ಯುವ ಪೀಳಿಗೆಯನ್ನು ಅಗತ್ಯ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಿದರೆ, ಮಾನವ ಬಂಡವಾಳದ ದೊಡ್ಡ ಶಕ್ತಿಯಾಗಿ ದೇಶ ಹೊರಹೊಮ್ಮಲಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ವಿಜಯ ಭಾರತಿ ಸಯಾನಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಾಯೋಜಕತ್ವದಲ್ಲಿ ಕೊಡಗು ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಮೈಸೂರು ವಿಭಾಗದ ಲಘು ಉದ್ಯೋಗ ಭಾರತಿ ಆಶ್ರಯದಲ್ಲಿ ಕೊಡಗು ವಿವಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಲಕ್ಷಾಂತರ ಜನರು ನಿರುದ್ಯೋಗ ಮತ್ತು ಅವಕಾಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ವೃತ್ತಿ ಕೌಶಲ್ಯ ಇಲ್ಲದಿರುವುದೇ ಕಾರಣವಾಗಿದೆ. ಭಾರತ ಸಾವಿರಾರು ವರ್ಷಗಳ ಹಿಂದಿನ ಕೌಶಲ್ಯ ಆಧಾರಿತ ಕಲಿಕೆಯ ಶ್ರೀಮಂತ ಸಂಪ್ರದಾಯ ಹೊಂದಿದ್ದು, ಇಲ್ಲಿಯ ಪ್ರಾಚೀನ ಗುರುಕುಲ ವ್ಯವಸ್ಥೆ ಕೇವಲ ಶೈಕ್ಷಣಿಕ ಜ್ಞಾನದ ಬಗ್ಗೆ ಮಾತ್ರವಲ್ಲದೆ ಜೀವನ ಕೌಶಲ್ಯಗಳ ಜತೆಗೆ ಕರಕುಶಲತೆ ಮತ್ತು ವೃತ್ತಿಪರತೆಯೊಂದಿಗೆ ವೃತ್ತಿ ಕೌಶಲ್ಯದ ತರಬೇತಿಯನ್ನೂ ನೀಡುತ್ತಿದ್ದವು. ನಂತರದ ಬೆಳವಣಿಗೆಗಳಲ್ಲಿ ವಸಾಹತುಶಾಹಿ ಆಳ್ವಿಕೆ ಮತ್ತು ಕೈಗಾರಿಕೀಕರಣದ ಪ್ರವೇಶದೊಂದಿಗೆ ಕೌಶಲ್ಯ ಆಧಾರಿತ ಕಲಿಕೆಯ ಪ್ರಮಾಣ ಕಡಿಮೆ ಆಯಿತು. ಈ ಮೂಲಕ ಸಾಂಪ್ರದಾಯಿಕ ವೃತ್ತಿ ಕೌಶಲ್ಯ ಮತ್ತು ಮಾದರಿ ಉದ್ಯಮದ ಅಗತ್ಯಗಳ ನಡುವಿನ ಸಂಪರ್ಕ ಕಡಿತಕ್ಕೆ ಕಾರಣವಾಯಿತು. ಭಾರತದಲ್ಲಿ ಕೌಶಲ್ಯ ಮತ್ತು ಉದ್ಯೋಗದ ಹಕ್ಕುಗಳನ್ನು ಸಮರ್ಥಿಸುವಲ್ಲಿ ಮತ್ತು ರಕ್ಷಿಸುವಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರಮುಖ ಪಾತ್ರ ವಹಿಸಿದೆ. ಮಾನವ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ವಿಫುಲವಾದ ಉದ್ಯೋಗಾವಕಾಶ ನಿರ್ಣಾಯಕವಾಗಿದ್ದು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಿದೆ. ಕಾರ್ಮಿಕರ ಹಕ್ಕುಗಳ ಮೇಲೆ ವಿಶೇಷವಾಗಿ ಕಾಳಜಿ ಹೊಂದಿದೆ. ಯಾಂತ್ರೀಕೃತ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕಾರ್ಮಿಕರು ಹಿಂದೆ ಬೀಳದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಉದ್ಯೋಗವಾಕಾಶ ಅಧಿಕವಾಗಿದೆ. ಉದ್ಯೋಗ ಕೌಶಲ್ಯ ಮತ್ತು ಉದ್ಯೋಗ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕೌಶಲ್ಯ ವಿಷಯಕ್ಕೆ ಬಂದರೆ ಭಾರತ ಹಿಂದುಳಿದಿದೆ ಎಂದು ಹೇಳಿದ ಅವರು, ಇದರಿಂದ ಭಾರತೀಯರು ಉದ್ಯೋಗ ಪಡೆದುಕೊಳ್ಳುವಲ್ಲಿ ಸಮಸ್ಯೆ ಆಗುತ್ತಿದೆ ಎಂದರು. ಇಂಟಿಲಿಜೆನ್ಸ್ ಬ್ಯೂರೋ ಆಫ್ ಇಂಡಿಯಾ ಮಾಜಿ ನಿರ್ದೇಶಕ ಹಾಗೂ ಆಯೋಗದ ಮಾಜಿ ಸದಸ್ಯರಾದ ರಾಜೀವ್ ಜೈನ್ ಮಾತನಾಡಿ, ದೇಶದಲ್ಲಿ ಉದ್ಯೋಗದ ಚಿತ್ರಣ ವೇಗವಾಗಿ ಬದಲಾಗುತ್ತಿದೆ. ತಂತ್ರಜ್ಞಾನ, ಜಾಗತೀಕರಣ ಮತ್ತು ಬದಲಾಗುತ್ತಿರುವ ಸಾಮಾಜಿಕ ಅಗತ್ಯಗಳು ನಾವು ಹೇಗೆ, ಯಾವಾಗ ಮತ್ತು ಎಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂಬುದರ ಚಿಂತನೆಗೆ ಕೊಡುಗೆ ನೀಡುತ್ತಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ವಿವಿ ಕುಲಪತಿ ಪ್ರೊ. ಅಶೋಕ್ ಎಸ್.ಆಲೂರ ಮಾತನಾಡಿ, ಉದಯೋನ್ಮುಖ ಅವಕಾಶಗಳಿಗೆ ಕಾರ್ಯಸೂಚಿ ಸಿದ್ಧಪಡಿಸುವಲ್ಲಿ ವೃತ್ತಿ ಕೌಶಲ್ಯ ಅಭಿವೃದ್ಧಿಯ ಪಾತ್ರ ಮತ್ತು ಹೊಸ ಉದ್ಯೋಗ ಮಾದರಿಗಳಿಗೆ ನಿರಂತರ ಹೊಂದಾಣಿಕೆಯ ಅಗತ್ಯತೆಯನ್ನು ಕಂಡುಕೊಳ್ಳಬೇಕು. ಯಾಂತ್ರೀಕೃತಗೊಂಡ ಸವಾಲುಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆಯೇ ಎನ್ನುವ ಚಿಂತನೆ ನಡೆಸಬೇಕು.
ಯುವಕರು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಸಾಧನಗಳೊಂದಿಗೆ ಅವರನ್ನು ಇಂದಿನ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳಿಸುತ್ತಿದೆಯೇ ಎನ್ನುವುದರ ಚರ್ಚೆ ನಡೆಯಬೇಕು ಎಂದು ಹೇಳಿದರು. ಮೈಸೂರು ವಿಭಾಗದ ಲಘು ಉದ್ಯೋಗ ಭಾರತಿ ಅಧ್ಯಕ್ಷೆ ಛಾಯಾ ನಂಜಪ್ಪ, ಚಾಮರಾಜನಗರ ವಿವಿ ಕುಲಪತಿ ಡಾ. ಎಂ.ಆರ್. ಗಂಗಾಧರ, ಹಾವೇರಿ ವಿವಿ ಕುಲಪತಿ ಡಾ. ಸುರೇಶ್ ಹೆಚ್. ಜಂಗಮಶೆಟ್ಟಿ, ಹಾಸನ ವಿವಿ ಕುಲಪತಿ ತರಿಕೇರೆ ತಾರಾನಾಥ್, ಕೊಡಗು ವಿವಿ ಸಿಂಡಿಕೇಡ್ ಸದಸ್ಯರಾದ ಡಾ. ಕೋರನ ಸರಸ್ವತಿ, ಡಾ. ದಯಾನಂದ ಕೂಡಕಂಡಿ, ಪುಟ್ಟರಾಜು ಡಾ. ಕಾವೇರಪ್ಪ ಮತ್ತಿತರರು ಇದ್ದರು.