




ಮಡಿಕೇರಿ ಏ.3 NEWS DESK : ಯುಗಾದಿ ಹಬ್ಬದ ಪ್ರಯುಕ್ತ ಕಾನಡ್ಕ ಕುಟುಂಬಸ್ಥರ ಆಶ್ರಯದಲ್ಲಿ 11ನೇ ವರ್ಷದ ಆಟೋಟ ಸ್ಪರ್ಧೆಯು ಮರಗೋಡಿನ ಕುಟುಂಬದ ಐನ್ ಮನೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮರಗೋಡು ಗೌಡ ಫುಟ್‍ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ಸುಜಯ್ ಉದ್ಘಾಟಿಸಿ, ಮಾತನಾಡಿ ಯುಗಾದಿ ಹಬ್ಬದ ಪ್ರಯುಕ್ತ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದಂತಾಗುತ್ತದೆ. ಕ್ರೀಡೆ ಎಲ್ಲರನ್ನು ಒಗ್ಗೂಡಿಸುವುದಲ್ಲದೆ ಕುಟುಂಬದಲ್ಲಿ ಶಾಂತಿ, ಸಹಬಾಳ್ವೆ ಮೂಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಶಿಕ್ಷಕಿ ಅಂಚೆಮನೆ ದಮಯಂತಿ ದಿನೇಶ್ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರತಿಭೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ವಿದ್ಯಾರ್ಥಿಗಳು ಹಾಗೂ ಯುವಜನತೆ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಬೆಳೆಯಬೇಕೆಂದರು. ಕುಟುಂಬದ ಹಿರಿಯರಾದ ಕಾನಡ್ಕ ಉಲ್ಲಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಕಾನಡ್ಕ ನಾಣಯ್ಯ ಉಪಸ್ಥಿತರಿದ್ದರು. ಕಾನಡ್ಕ ರಾಜೇಶ್ವರಿ ಹಾಗೂ ತಂಡ ಪ್ರಾರ್ಥಿಸಿ, ಕಾನಡ್ಕ ಪುನೀತ್ ಸ್ವಾಗತಿಸಿ, ಕಾನಡ್ಕ ಹನೀಶ್ ನಿರೂಪಿಸಿ, ವಂದಿಸಿದರು. ::: ವಿವಿಧ ಕ್ರೀಡೆ ::: ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಹಿರಿಯರವರೆಗೆ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆಗಳನ್ನು ನಡೆಸಲಾಯಿತು. ದಂಪತಿಗಳಿಗೆ ಕೃಷ್ಣ ರುಕ್ಮಿಣಿ ಓಟ, ರಾಮಸೀತೆ ಓಟ, ಬಾಲ್ ಬ್ಯಾಲೆನ್ಸ್ ಓಟ, ಹನುಮಂತನ ಓಟ, ಹಗ್ಗಜಗ್ಗಾಟ ಸ್ಪರ್ಧೆ ಸೇರಿದಂತೆ ಸುಮಾರು 20 ಬಗೆಯ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ::: ಸಮಾರೋಪ ::: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಆಕಾಶವಾಣಿಯ ಸುದ್ದಿವಾಚಕ ಉಳುವಾರ ರೋಶನ್ ವಸಂತ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಆಟೋಟಗಳು ಮರೆಯಾಗುತ್ತಿವೆ ಇವುಗಳನ್ನು ಉಳಿಸಿಕೊಂಡು ಹೋಗುವುದರೊಂದಿಗೆ ನಮ್ಮ ಸಂಸ್ಕೃತಿ ಪರಂಪರೆ, ಆಚಾರ, ವಿಚಾರಗಳನ್ನು ಬೆಳೆಸಬೇಕು. ಹಬ್ಬಗಳನ್ನು ಆಚರಿಸುವುದು ಮಾತ್ರವಲ್ಲ, ಅವುಗಳ ಹಿನ್ನೆಲೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಭಾಷೆ ಉಳಿದರೆ ಮಾತ್ರ ಜನಾಂಗ ಉಳಿಯಲು ಸಾಧ್ಯ ಎಂದು ಹೇಳಿದರು. ಉದ್ಯಮಿ ಇಟ್ಟಣಿಕೆ ರಾಮಕೃಷ್ಣ ಮಾತನಾಡಿ, ಹಳ್ಳಿಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ನೀಡಬೇಕು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿಕೊಂಡು ಮುನ್ನಡೆಯಬೇಕೆಂದರು. ಕಾಫಿ ಬೆಳೆಗಾರ ಪಾಂಡನ ವಿವೇಕಾನಂದ ಮಾತನಾಡಿ, ಕುಟುಂಬ ಒಗ್ಗೂಡಿ ಇಂತಹ ಆಟೋಟ ಸ್ಪರ್ಧೆಗಳನ್ನು ನಡೆಸುವುದರಿಂದ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಹಿರಿಯರಾದ ಕಾನಡ್ಕ ಚೀರಾಮಣಿ ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾನಡ್ಕ ಪ್ರಸಾದ್ ಸ್ವಾಗತಿಸಿ, ಕಾನಡ್ಕ ಹನೀಶ್ ನಿರೂಪಿಸಿ, ಕಾನಡ್ಕ ಪುನೀತ್ ವಂದಿಸಿದರು.