ಮಡಿಕೇರಿ ಮೇ 6 NEWS DESK : ಶ್ರೀ ದಂಡಿನಮ್ಮ ಮತ್ತು ಶ್ರೀ ಬಸವೇಶ್ವರ, ಶ್ರೀ ಮುತ್ತತ್ ರಾಯ ದೇವಸ್ಥಾನ ಮತ್ತು ಗ್ರಾಮಗಳ ಸೇವಾ ಸಮಿತಿ ಹಾಗೂ ಕೂಡಿಗೆ- ಕೊಪ್ಪಲು, ಹೆಗಡ್ಡಳ್ಳಿ ಗ್ರಾಮಸ್ಥರ ವತಿಯಿಂದ ದಂಡಿನಮ್ಮ ಗ್ರಾಮ ದೇವತೆಯ ಜಾತ್ರಾ ಮಹೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಹಬ್ಬದ ಅಂಗವಾಗಿ ಗಣಪತಿ ಹೋಮ, ನವಗ್ರಹ ಹೋಮ, ರುದ್ರ ಹೋಮ, ಮೃತ್ಯುಂಜಯ ಹೋಮ, ಗಾಯಿತ್ರಿ ಹೋಮ , ನಂತರ ದೇವಿಗೆ ಪಂಚಾಮೃತ ಅಭಿಷೇಕ, ರುದ್ರ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ಅಗ್ನಿ ಸ್ಧಾಪನೆ, ನಂತರ ಶ್ರೀ ಬಸವೇಶ್ವರ ದೇವಾಲಯದಿಂದ ಗ್ರಾಮಸ್ಥರು ಮತ್ತು ಹರಕೆ ಹೊತ್ತ ನೂರಾರು ಭಕ್ತರು ಕಾವೇರಿ ನದಿಗೆ ತೆರಳಿ ಗಂಗಾ ಪೂಜೆ, ಕಳಸ ಪೂಜೆ, ಹಣ್ಣಾಡಗೆ ಉತ್ಸವದ ಮೂಲಕ ಮಂಗಳವಾದ್ಯ, ನಾಡವಾದ್ಯದ ಮೂಲಕ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ದಂಡಿನಮ್ಮ ದೇವಾಲಯ ಮುಂಭಾಗದಲ್ಲಿ ಹಾಕಲಾಗಿದ್ದ ಬೆಂಕಿ ಕೊಂಡದಲ್ಲಿ ಹರಕೆ ಹೊತ್ತ ಭಕ್ತರು ಕೊಂಡೋತ್ಸವದಲ್ಲಿ ಭಾಗಿಯಾಗಿದ್ದರು. ನಂತರ ಮುಂಜಾನೆ ಉಯ್ಯಾಲೆ ಮಹೋತ್ಸವ ಕಾರ್ಯಕ್ರಮ ನಡೆಯಿತು. ಮರುದಿನ ಬೆಳಿಗ್ಗೆ ಶ್ರೀ ದಂಡಿನಮ್ಮ ದೇವಿಗೆ ಪೂಜಾ ಕೈಂಕರ್ಯಗಳು, ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಅನ್ನಸಂರ್ತಪಣೆ ಕಾರ್ಯ ನಡೆಯಿತು. ಪೂಜ್ಯೋತ್ಸವದಲ್ಲಿ ಕೂಡಿಗೆ, ಕೂಡುಮಂಗಳೂರು ಮದಲಾಪುರ ಕಣಿವೆ, ಹೆಬ್ಬಾಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ದೇವಿಯ ದರ್ಶನ ಪಡೆದರು. ಪೂಜಾ ಕೈಂಕರ್ಯಗಳನ್ನು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಅರ್ಚಕ ರಾಘವೇಂದ್ರ ಆರ್ಚಾರ್ ಮತ್ತು ಚಂದ್ರಮುರಳಿ ಆರಾಧ್ಯ ತಂಡದವರು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ. ಎನ್. ಮಂಜುನಾಥ, ಕಾರ್ಯದರ್ಶಿ ಕೆ.ಸಿ. ಚಂದ್ರಶೇಖರ್, ಉಪಾಧ್ಯಕ್ಷ ಪ್ರವೀಣ್, ಉಪ ಕಾರ್ಯದರ್ಶಿ ಶೇಖರ್, ಗೌರವ ಅಧ್ಯಕ್ಷ , ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ. ಟಿ ಗಿರೀಶ್, ,ಕೆ.ಟಿ. ಶ್ರೀನಿವಾಸ್, ಸೇರಿದಂತೆ ಸಮಿತಿ ನಿರ್ದೇಶಕರು, ಸದಸ್ಯರು, ಮೂರು ಗ್ರಾಮಗಳ ಗ್ರಾಮಸ್ಥರು, ಸೇರಿದಂತೆ ಭಕ್ತರು ಹಾಜರಿದ್ದರು. ದೇವಾಲಯ ಸಮಿತಿಯ ವತಿಯಿಂದ ಭಕ್ತರಿಗೆ ಅನ್ನಸಂರ್ತಪಣೆ ನಡೆಯಿತು. ದಂಡಿನಮ್ಮ ದೇವಿಯ ಹಬ್ಬಚಾರಣೆಯ ಗ್ರಾಮವು ತಳಿರು ತೋರಣಗಳಿಂದ, ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತು.











