ಮಡಿಕೇರಿ ಜೂ.26 NEWS DESK : ‘ಸಿಂಗಲ್ ಆರ್‌ಟಿಸಿ’ ನಿಯಮಾವಳಿಯಿಂದ ಕೊಡಗು ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರ್ಕಾರದ ‘ಶೂನ್ಯ ಬಡ್ಡಿ ದರದ ಸಾಲ’ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸಲು ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೊಡಗು ಏಕೀಕರಣ ರಂಗ ಆಗ್ರಹಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ತೇಲಪಂಡ ಎಂ.ಸೋಮಯ್ಯ ಅವರು ಸಹಕಾರ ಸಂಘಗಳ ಮೂಲಕ ವಿತರಿಸುವ ಶೂನ್ಯ ಬಡ್ಡಿ ದರದ ಸಾಲದ ಪ್ರಯೋಜನ ಪಡೆಯಲು ಕೃಷಿಕರು ‘ಸಿಂಗಲ್ ಆರ್‌ಟಿಸಿ’ಯನ್ನು ನೀಡಬೇಕು, ಇಲ್ಲವೆ ಕುಟುಂಬದ ಇತರರ ಹೆಸರು ಇದ್ದಲ್ಲಿ, ಪಾಲು ಪಾರಿಕತ್ತು ಮಾಡಿಕೊಂಡು ಸಿಂಗಲ್ ಆರ್‍ಟಿಸಿ ಹೊಂದಬೇಕೆನ್ನುವ ನಿಯಮವನ್ನು ಸರ್ಕಾರ ರೂಪಿಸಿ ಕಡ್ಡಾಯಗೊಳಿಸಿದೆ. ಇದು ಕೃಷಿಕರು ಸಾಲ ಸೌಲಭ್ಯ ಪಡೆಯಲು ತೊಡಕನ್ನುಂಟುಮಾಡುತ್ತಿದೆ ಎಂದರು. ವಿಶಿಷ್ಟ ಭೂಹಿಡುವಳಿಗಳನ್ನು ಕೊಡಗು ಜಿಲ್ಲೆ ಹೊಂದಿದೆ. ಬಹಳಷ್ಟು ರೈತರು ಭೂಮಿಯನ್ನು ಹೊಂದಿದ್ದಾರಾದರು, ಅವರ ಆರ್‍ಟಿಸಿಯಲ್ಲಿ ಕುಟುಂಬದ ಹಲವರ ಹೆಸರು ದಾಖಲಾಗಿದೆ. ಮತ್ತೆ ಹಲವಷ್ಟು ಜಾಗಗಳಲ್ಲಿ ಕೃಷಿ ನಡೆದಿದ್ದರು ಜಂಟಿ ಆರ್‍ಟಿಸಿಯಿಂದಾಗಿ ಕಂದಾಯ ನಿಗದಿ ಇಲ್ಲಿಯವರೆಗು ಸಾಧ್ಯವಾಗಿಲ್ಲ. ಮೃತಪಟ್ಟ ಕುಟುಂಬಸ್ಥರ ಹೆಸರನ್ನು ಆರ್‍ಟಿಸಿಯಿಂದ ತೆಗೆದು ಹಾಕುವ ಪೌತಿ ಖಾತೆ ಮೊದಲಾದವುಗಳ ನೂರಾರು ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಧೂಳು ತಿನ್ನುತ್ತಾ ಹಲವಾರು ವರ್ಷಗಳಿಂದ ಬಿದ್ದಿದೆ. ಇದರಿಂದ ಕೃಷಿಕರು ಸ್ವಂತ ಹಿಡುವಳಿ ಭೂಮಿಯನ್ನು ಹೊಂದಿದ್ದರು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಗಮನ ಸೆಳೆದರು. ಕಂದಾಯ ಇಲಾಖೆಯಲ್ಲಿನ ಕಾರ್ಯ ವಿಳಂಬ ಮತ್ತು ವೈಫಲ್ಯಗಳಿಗೆ ಜಿಲ್ಲೆಯ ಭೂ ಹಿಡುವಳಿದಾರರು ಯಾವುದೇ ಕಾರಣಕ್ಕೂ ಹೊಣೆಗಾರರಲ್ಲ. ಹೀಗಿದ್ದೂ ಕಂದಾಯ ಇಲಾಖೆಯ ವೈಫಲ್ಯಗಳಿಂದ ಭೂಹಿಡುವಳಿದಾರರು ಸಂಕಷ್ಟ ಎದುರಿಸುವಂತಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಮಿಯ ಸಮಸ್ಯೆಗಳು ಬಗೆಹರಿಯುವವರೆಗೆ ಈ ನಿಯಮಗಳನ್ನು ತಡೆ ಹಿಡಿಯುವಂತೆ ತೇಲಪಂಡ ಎಂ.ಸೋಮಯ್ಯ ಒತ್ತಾಯಿಸಿದರು. ಕಂದಾಯ ಇಲಾಖೆಯಿಂದ ನಡೆಯಬೇಕಾದ ಕೆಲಸಗಳು ಸಮರ್ಪಕವಾಗಿ ನಡೆಯದಿರುವ ಬಗ್ಗೆ ಮಾಹಿತಿ ಇದ್ದರೂ, ಸಹಕಾರ ಸಂಘಗಳು, ಸಾಲ ಪಡೆದ ಎರಡು ತಿಂಗಳಲ್ಲಿ ಆರ್‍ಟಿಸಿಯಲ್ಲಿನ ಜಾಗದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಬೆಳೆಗಾರರಿಂದ ಮುಚ್ಚಳಿಕೆ ಪಡೆಯುತ್ತಿವೆ. ಆದರೆ, ಈ ಅಲ್ಪಾವಧಿಯಲ್ಲಿ ಯಾವುದೇ ಕಾರಣಕ್ಕೂ ಆರ್‍ಟಿಸಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ರೀತಿ ಮುಚ್ಚಳಿಕೆ ಪಡೆದ ಬಳಿಕ ಬೆಳೆಗಾರರಿಂದ ಪಡೆದ ಸಾಲಕ್ಕೆ ವರ್ಷ ಕಳೆದ ಬಳಿಕ ಬಡ್ಡಿಯನ್ನು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕೊಡಗು ಏಕೀಕರಣ ರಂಗದ ಸದಸ್ಯ ಅಜ್ಜಿನಂಡ ತಮ್ಮು ಪೂವಯ್ಯ ಮಾತನಾಡಿ, ಜಿಲ್ಲೆಯ ಹಿಡುವಳಿದಾರರ ಭೂಮಿಗೆ ಕಂದಾಯ ನಿಗದಿ, ಪಾಲು ಪಾರಿಕತ್ತು, ಪಟ್ಟೆದಾರರ ಹೆಸರನ್ನು ತೆಗೆಯುವ ಕಾರ್ಯಗಳಿಗೆ ಕಾಲಮಿತಿಯ ಯೋಜನೆಯನ್ನು ಕಂದಾಯ ಸಚಿವರು ರೂಪಿಸಬೇಕೆಂದು ಒತ್ತಾಯಿಸಿದರು. ಕಂದಾಯ ಇಲಾಖೆಯ ಮೂಲಕ ಜಿಲ್ಲೆಯ ಭೂ ಹಿಡುವಳಿಗಳಲ್ಲಿನ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕೊಡಗಿಗೆ ವಿಶೇಷ ಡಿಸಿ ಅಥವಾ ಉಪ ವಿಭಾಗಾಧಿಕಾರಿಗಳನ್ನು ನೇಮಿಸಬೇಕು ಎಂದರು. ಮತ್ತೊಬ್ಬ ಸದಸ್ಯ ಮಂದಪಂಡ ಕೆ.ಅಪ್ಪಚ್ಚು ಸತೀಶ್ ಮಾತನಾಡಿ, ಕೆಲವು ವರ್ಷಗಳ ಹಿಂದೆ ಜಿಲ್ಲೆಯ ಭೂ ಹಿಡುವಳಿಗಳಲ್ಲಿನ ಸಮಸ್ಯೆ ಬಗೆಹರಿಕೆಗೆ ‘ಪೈಲಟ್ ಪ್ರಾಜೆಕ್ಟ್’ನಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಯೋಗಿಕವಾಗಿ ಮಡಿಕೇರಿ ತಾಲ್ಲೂಕಿನ ಬೇಂಗೂರು, ವಿರಾಜಪೇಟೆ ತಾಲ್ಲೂಕಿನ ಕುಂದ ಮತ್ತು ಅಮ್ಮತ್ತಿ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಜಾಗದ ಸರ್ವೇ ಕಾರ್ಯಗಳನ್ನು ನಡೆಸಲಾಗಿದೆ. ಆದರೆ, ಬಳಿಕ ಈ ಪ್ರಕ್ರಿಯೆ ಸ್ಥಗಿತವಾಗಿದೆಯೆಂದು ತಿಳಿಸಿದರು.












