ಮಡಿಕೇರಿ NEWS DESK ಜೂ.30 : ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ವಿರಾಜಪೇಟೆ ಕ್ಷೇತ್ರ ಸಂಚಾರ ಮಾಡಿ ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಿದರು. ವಿರಾಜಪೇಟೆ ತಾಲ್ಲೂಕು ವಿ.ಬಾಡಗದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಹಾಕಿ ಕ್ರೀಡಾ ತರಬೇತಿ ಕೇಂದ್ರದ ಯೋಜನೆಗಾಗಿ ಲಭ್ಯ ಇರುವ ಸ್ಥಳ ಪರಿಶೀಲನೆ ನಡೆಸಿದರು. ಸುಮಾರು 11 ಏಕರೆಯಷ್ಟು ಸರಕಾರಿ ಜಾಗವನ್ನು ತಕ್ಷಣ ಪರಿಗಣಿಸಿ ಒಂದು ವಾರದೊಳಗೆ ಸರ್ವೆ ನಕ್ಷೆ ನೀಡುವಂತೆ ಸರ್ವೆ ಇಲಾಖೆಗೆ ಸೂಚನೆ ನೀಡಿದರು. ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಕಾರ್ಯಕ್ರಮದ ಭಾಗವಾಗಿ ಪೊನ್ನಂಪೇಟೆ ತಾಲ್ಲೂಕಿನ ಹರಿಹರ, ಬೆಳ್ಳೂರು ಹಾಗೂ ಹುದಿಕೇರಿ ಭಾಗದಲ್ಲಿ ಮೂರು 25 ಕೆವಿ ವಿದ್ಯುತ್ ಪರಿವರ್ತಕಗಳನ್ನು ಶಾಸಕರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಾನು ಈ ಹಿಂದೆ ಚುನಾವಣೆಗೆ ಮೊದಲು ಆಶ್ವಾಸನೆ ನೀಡಿದಂತೆ ಕ್ಷೇತ್ರದಾದ್ಯಂತ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಸರಬರಾಜಿಗೆ ಹೆಚ್ಚುವರಿ ಅನುದಾನ ತಂದು ಈ ಯೋಜನೆ ರೂಪಿಸಿರುವುದಾಗಿ ಹೇಳಿದರು. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕಳೆದ ಫೆಬ್ರವರಿಯಲ್ಲಿ ತಾನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದು, ಬಹುತೇಕ ಮುಂದಿನ ಜನವರಿ 2026ರ ಒಳಗಾಗಿ ಕ್ಷೇತ್ರದಾದ್ಯಂತ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು. ಸರ್ಕಾರ ತನ್ನ ಮಹತ್ವಕಾಂಕ್ಷೆಯ ಡಿಜಿಟಲೀಕರಣ ಆಡಳಿತದ ವ್ಯವಸ್ಥೆಗೆ ಪೂರಕವಾಗಿ, ಇ-ವ್ಯವಹಾರವನ್ನು (ಕಾಗದರಹಿತ ಆಡಳಿತ) ಪ್ರೋತ್ಸಾಹಿಸಲು ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಉಚಿತ ಲ್ಯಾಪ್ಟಾಪ್ ಅನ್ನು ಒದಗಿಸುತ್ತಿದೆ. ಇದರ ಭಾಗವಾಗಿ ವಿರಾಜಪೇಟೆ ಕ್ಷೇತ್ರದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪೊನ್ನಣ್ಣ ಅವರು ಲ್ಯಾಪ್ಟಾಪ್ ವಿತರಿಸಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲ್ಲೂಕಿನ ಬಲ್ಯಮಂಡೂರಿನಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೇಟಿ ನೀಡಿದರು. ಜಿಲ್ಲಾಡಳಿತದ ಸೂಚನೆಯಂತೆ, ಈ ಹಿಂದೆ ಬಲ್ಯಮುಂಡೂರು ಭಾಗದ ಹಲವು ನಿವಾಸಿಗಳನ್ನು ಸುರಕ್ಷತೆಗಾಗಿ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ. ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಜನರ ಯೋಗಕ್ಷೇಮವನ್ನು ವಿಚಾರಿಸಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಇದೇ ಸಂದರ್ಭ ನಿವಾಸಿಗಳಿಗೆ ಶಾಸಕರು ಭರವಸೆ ನೀಡಿದರು. ಕುಟ್ಟಂದಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಮಾನವ-ಪ್ರಾಣಿ ಸಂಘರ್ಷದ ಕುರಿತು ಅರಣ್ಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ನಡೆಸಿದರು. ಸಾರ್ವಜನಿಕರ ಮನವಿಯನ್ನು ಆಲಿಸಿದ ಪೊನ್ನಣ್ಣ ಅವರು, ಅರಣ್ಯ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಮತ್ತಿತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.













