ಕುಶಾಲನಗರ ಜು.16 NEWS DESK : ಕುಶಾಲನಗರ ಕ್ಲಸ್ಟರ್ ವ್ಯಾಪ್ತಿಯ ಪಟ್ಟಣದ ಸರಹದ್ದಿನ ಮುಳ್ಳುಸೋಗೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಎಸ್.ಡಿ.ಎಂ.ಸಿ.ಸಹಭಾಗಿತ್ವದಲ್ಲಿ ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮದ ಒಂದನೇ ತರಗತಿ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ಕುರಿತು ಮಾಹಿತಿ ನೀಡಿದ ಸಿ.ಆರ್.ಪಿ., ಟಿ.ಈ.ವಿಶ್ವನಾಥ್, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಮತ್ತು ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಆಂಗ್ಲಭಾಷಾ ಜ್ಞಾನ ಬೆಳೆಸುವ ದಿಸೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗುತ್ತಿದೆ ಎಂದರು. ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ಧಿಗೆ ಪೋಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಭಾಗ್ಯ, ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭಿಸಲಾಗುತ್ತಿದ್ದು, ಇದರಿಂದ ಮಕ್ಕಳು ಮಾತೃಭಾಷೆಯೊಂದಿಗೆ ಆಂಗ್ಲ ಭಾಷೆ ಕಲಿಯಲು ಸುಲಭವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷ ಹರೀಶ್ ಮಾತನಾಡಿ, ತಮ್ಮ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ತುಂಬಾ ಸಂತಸ ತಂದಿದೆ.ಪೋಷಕರು ತಮ್ಮ ಮಕ್ಕಳ ಕಲಿಕಾ ಪ್ರಗತಿ ಬಗ್ಗೆ ತಿಳಿಯಲು ಆಗಿಂದಾಗ್ಗೆ ಶಾಲೆಗೆ ಭೇಟಿ ನೀಡಬೇಕು ಎಂದು ಮನವಿ ಮಾಡಿದರು. ಶಾಲಾ ಶಿಕ್ಷಕರಾದ ಎಸ್.ಆರ್. ಶಿವಲಿಂಗ, ಟಿ.ಆರ್. ಉಷಾ, ಎಸ್‌ಡಿಎಂಸಿ ಸದಸ್ಯರಾದ ರಶ್ಮಿ, ಹೇಮ, ಸುಮಯ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಎಸ್.ಆರ್. ಶಿವಲಿಂಗ ನಿರ್ವಹಿಸಿದರು.











