ಮಡಿಕೇರಿ ಜು.15 NEWS DESK : ರಾಜಾಸೀಟಿನಲ್ಲಿ ‘ಮಕ್ಕಳ ಪುಟಾಣಿ ರೈಲು’ ಆರಂಭ ಸಂಬಂಧ ದಕ್ಷಿಣ ವಲಯ ರೈಲ್ವೆ ವಿಭಾಗದ ಎಂಜಿನಿಯರ್‍ಗಳು ಪರಿಶೀಲಿಸಿದ್ದು, ಈ ಬಗ್ಗೆ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈಲು ಬೋಗಿ ಅಳವಡಿಸುವುದು ಸೇರಿದಂತೆ ದಕ್ಷಿಣ ರೈಲ್ವೆ ವಲಯದ ವಿಭಾಗದ ಎಂಜಿನಿಯರ್‍ಗಳು ಮಾಹಿತಿ ಪಡೆದಿದ್ದು, ಈ ಸಂಬಂಧ ವರದಿ ಬಂದ ನಂತರ ಪುಟಾಣಿ ರೈಲು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಪ್ರತಿಕ್ರಿಯಿಸಿದರು. ಈ ಕುರಿತು ವಿಷಯ ಪ್ರಸ್ತಾಪಿಸಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವಿಶೇಷ ಆಹ್ವಾನಿತರಾದ ಜಿ.ಚಿದ್ವಿಲಾಸ್ ಅವರು ರಾಜಾಸೀಟಿನಲ್ಲಿ ಮಕ್ಕಳ ರೈಲು ಸ್ಥಗಿತವಾಗಿ ಹಲವು ವರ್ಷಗಳಾಗಿದ್ದು, ಈ ಬಗ್ಗೆ ತುರ್ತು ಕ್ರಮವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು. ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ‘ಮರ್ಕರ ಸ್ಕ್ವೇರ್’ ಅನ್ನು ಆಕರ್ಷಣೀಯಗೊಳಿಸಿ ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಂತಿ ಗಣೇಶ್ ಅವರು ರಾಜಾಸೀಟು ಮುಖ್ಯ ದ್ವಾರದ ಬಳಿ ಅಂಗಡಿಗಳು ತುಂಬಾ ಇದ್ದು, ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು. ಬಳಿಕ ಮಾತನಾಡಿದ ಚಿದ್ವಿಲಾಸ್, ಮಡಿಕೇರಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಕಿರಿದಾದ ರಸ್ತೆಗಳು ಇರುವುದರಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಬೇಕು ಎಂದು ಪ್ರಸ್ತಾವನೆ ಇದ್ದು, ಈ ಸಂಬಂಧ ತುರ್ತಾಗಿ ಆದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇದಕ್ಕಾಗಿ ಅನುದಾನ ಮೀಸಲಿದ್ದು, ಟೆಂಡರ್ ಹಂತದಲ್ಲಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆ ಸಂದರ್ಭದಲ್ಲಿ ಮಡಿಕೇರಿ ನಗರದಲ್ಲಿ ವಾಹನ ಪಾರ್ಕಿಂಗ್‍ಗೆ ತೊಂದರೆ ಇದೆ. ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದರು, ಅದರಂತೆ ನಡೆದುಕೊಳ್ಳಬೇಕು ಎಂದು ಹೇಳಿದರು. ದಸರಾ ಸಂದರ್ಭದಲ್ಲಿ ‘ಆಹಾರ ಮೇಳ’ ಆಯೋಜಿಸುವಂತಾಗಬೇಕು ಎಂದು ಜಿ.ಚಿದ್ವಿಲಾಸ್ ಅವರು ಸಲಹೆ ಮಾಡಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ದಸರಾಗು ಮೊದಲೇ ಆಹಾರ ಮೇಳ ಆಯೋಜಿಸುವುದು ಒಳ್ಳೆಯದು ಎಂದರು. ದಸರಾ ಸಂದರ್ಭದಲ್ಲಿಯೂ ಸಹ ಪ್ರವಾಸೋದ್ಯಮ ಕ್ಷೇತ್ರದವರು ತೊಡಗಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವಿಶೇಷ ಆಹ್ವಾನಿತರಾದ ಜಿ.ಚಿದ್ವಿಲಾಸ್ ಜಿಲ್ಲೆಯಲ್ಲಿ ಪ್ಲಾಸ್ಟಿಕ್‍ನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮಡಿಕೇರಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಪ್ರವಾಸಿ ಬಸ್ ಸಂಚಾರಕ್ಕೆ ಅವಕಾಶ ಮಾಡುವಂತಾಗಬೇಕು. ಇದರಿಂದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಚಿದ್ವಿಲಾಸ್ ಅಭಿಪ್ರಾಯಪಟ್ಟರು. ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಈ ಸಂದರ್ಭ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಕುಶಾಲನಗರ ಬಳಿಯ ತಾವರೆಕೆರೆ ಅಭಿವೃದ್ಧಿ ಪಡಿಸಿದ್ದಲ್ಲಿ ಇದನ್ನು ಸಹ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು. ಇರ್ಪು ಜಲಪಾತದಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಪ್ರವಾಸಿಗರ ಅನುಕೂಲಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.ಹೋಟೆಲ್ ಅಸೋಷಿಯೇಷನ್‍ನ ದಿನೇಶ್ ಕಾರ್ಯಪ್ಪ ಅವರು ಮಾತನಾಡಿ ಪ್ರವಾಸಿ ಸ್ಥಳಗಳ ಬಳಿ ಸೈನ್‍ಬೋರ್ಡ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಹೋಂ ಸ್ಟೇ ಅಸೋಷಿಯೇಷನ್‍ನ ಮಾಜಿ ಅಧ್ಯಕ್ಷರಾದ ಕರುಂಬಯ್ಯ ಅವರು ಮಾತನಾಡಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದು, ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸುವಂತಾಗಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ವಾಹನ ಪಾರ್ಕಿಂಗ್ ಸ್ಥಳವನ್ನು ಗುರುತು ಮಾಡಬೇಕು. ಹೋಟೆಲ್, ಹೋಂಸ್ಟೇ ರೆಸಾರ್ಟ್‍ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿ ಫುಟೇಜ್‍ನಿಂದ ಮಾಹಿತಿ ಪಡೆಯಲು ಸಾಧ್ಯವಾಗಲಿದ್ದು, ಆ ನಿಟ್ಟಿನಲ್ಲಿ ಸಾಮೂಹಿಕ ಜವಾಬ್ದಾರಿ ಅಗತ್ಯ ಎಂದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಕಾಫಿ ತಯಾರಿಸುವ ವಿಧಾನ ಕುರಿತು ತರಬೇತಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರನ್ನು ಜಿಲ್ಲೆಗೆ ಆಹ್ವಾನಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಚಿದ್ವಿಲಾಸ್ ಅನಧಿಕೃತ ಹೋಂಸ್ಟೇಗಳಿಗೆ ಮಾಹಿತಿ ನೀಡಿ ನೋಂದಣಿ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಅನಧಿಕೃತ ಹೋಂ ಸ್ಟೇ ತಡೆಯಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೋಂಸ್ಟೇಗಳ ನೋಂದಣಿ ಹೆಚ್ಚಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಅವರು ಮಾತನಾಡಿ ಜಿಲ್ಲೆಯಲ್ಲಿ ಹೋಂ ಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಹೋಂಸ್ಟೇ, ಹೋಟೆಲ್ ಸೇರಿದಂತೆ ಪ್ರವಾಸೋದ್ಯಮ ಸಂಬಂಧಿಸಿದಂತೆ ‘ಸಕ್ಸಸ್ ಸ್ಟೋರಿ’ ಪ್ರಕಟ/ಪ್ರಸಾರ ಆಗುವಂತಾಗಬೇಕು. ಇದರಿಂದ ಹೋಂಸ್ಟೇ, ರೆಸಾರ್ಟ್‍ಗಳ ಬಗ್ಗೆ ಹೆಚ್ಚಿನ ವಿಶ್ವಾಸ ಬರಲಿದೆ ಎಂದರು. ಈ ವರ್ಷ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಯಾವುದಾದರೂ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಜಿಲ್ಲೆಯಲ್ಲಿನ ಆಸಕ್ತರು ಕೊಡಗು ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಲಿಖಿತವಾಗಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಪ್ರವಾಸೋದ್ಯಮ ಮಾಹಿತಿ ಒಳಗೊಂಡ ಮಾರ್ಗಸೂಚಿಯನ್ನು ತಯಾರಿಸಬೇಕು. ಇಲ್ಲಿನ ಇತಿಹಾಸ, ಸಂಸ್ಕøತಿ, ಕಲೆ ಬಗ್ಗೆ ಮಾಹಿತಿ ಇರಬೇಕು. ಕಾಫಿ ಟೇಬಲ್ ಬುಕ್‍ನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಪ್ರವಾಸೋದ್ಯಮ ಚಟುವಟಿಕೆ ಬಗ್ಗೆ ಮಾಹಿತಿ ನೀಡುವುದು, ಪ್ರವಾಸಿಗರ ರಕ್ಷಣೆ ಮತ್ತು ಸುರಕ್ಷತೆಗೆ ಒತ್ತು ನೀಡುವುದು, ಮೂಲಭೂತ ಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ನಗರದ ಕೋಟೆ ಆವರಣದ ಸುತ್ತ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಂಬೆಕಲ್ಲು ನವೀನ್ ಅವರು ಮಾತನಾಡಿ, ರಾಜಾಸೀಟು ಬಳಿ ಕೂರ್ಗ್ ವಿಲೇಜ್ ಆರಂಭವಾಗಿದ್ದು, ಪ್ರವಾಸಿಗರು ಸಹ ಭೇಟಿ ನೀಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಹೋಂ ಸ್ಟೇ, ರೆಸಾರ್ಟ್, ಟೂರ್ ಮತ್ತು ಟ್ರಾವೆಲ್ ಸಂಸ್ಥೆಯವರು ಇದುವರೆಗೆ ನೋಂದಣಿ ಮಾಡದಿದ್ದಲ್ಲಿ ನೋಂದಣಿ ಮಾಡಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹಿರಿಯ ಪತ್ರಕರ್ತ ಅನಿಲ್ ಹೆಚ್. ಟಿ. ಮಾತನಾಡಿ. ಹೊರಜಿಲ್ಲೆಗಳಲ್ಲಿ ಕೊಡಗಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಪ್ರಚಾರ ಆಗಬೇಕು. ಬಾನುಲಿ ಎಫ್.ಎಂ., ಮಲ್ಟಿ ಪ್ಲೆಕ್ಸ್ ಗಳಲ್ಲಿ ಕೊಡಗಿನ ಬಗ್ಗೆ ಪ್ರಚಾರ ಆದಾಗ ಪ್ರವಾಸಿಗರಿಗೂ ಕೊಡಗಿನ ಬಗ್ಗೆ ಅಗತ್ಯ ಮಾಹಿತಿ ದೊರಕುತ್ತದೆ ಎಂದರಲ್ಲದೆ, ರಾಜ್ಯ ಮಟ್ಟದ ಮತ್ತು ಇತರ ರಾಜ್ಯಗಳ ಪತ್ರಿಕೆಗಳಲ್ಲಿ ಕೊಡಗು ಪ್ರವಾಸದ ಬಗ್ಗೆ ಮಾಹಿತಿ ಲೇಖನ ಪ್ರಕಟ ಆಗಬೇಕು. ಈ ಮೂಲಕ ಪ್ರವಾಸಿಗರಿಗೆ ದೊಡ್ಡ ರೀತಿಯಲ್ಲಿ ಕೊಡಗಿನ ಪರಿಚಯ ಆಗಲಿದೆ ಎಂದರು.ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎನ್.ಎಸ್.ಪಣೀಂದ್ರ, ಪರಿಸರ ಅಧಿಕಾರಿ ರಘುರಾಮ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಕೆಆರ್‍ಐಡಿಎಲ್ ಸಂಸ್ಥೆಯ ಎಂಜಿನಿಯರ್ ಪ್ರಮೋದ್, ಕೊಡಗು ಜಿಲ್ಲಾ ಟೂರ್ ಅಂಡ್ ಟ್ರಾವೆಲ್ ಅಧ್ಯಕ್ಷರಾದ ವಸಂತ್, ಸೋಮವಾರಪೇಟೆ ತಾಲ್ಲೂಕಿನ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ರೋಹಿತ್, ದುಬಾರೆ ರಿವರ್ ರ್ಯಾಪ್ಟಿಂಗ್ ಅಸೋಷಿಯೇಷನ್ ಅಧ್ಯಕ್ಷರಾದ ಚಂಗಪ್ಪ, ಬರಪೊಳೆ ರಿವರ್ ರ್ಯಾಪ್ಟಿಂಗ್ ಅಧ್ಯಕ್ಷರಾದ ರತನ್ ಸಿ.ಎಸ್., ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಜತಿನ್ ಇತರರು ಇದ್ದರು.










