ಬೆಂಗಳೂರು NEWS DESK ಆ.18 : ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಪ್ರಶಸ್ತಿಗೆ ಪಾತ್ರರಾದ ಹಿರಿಯ ಪತ್ರಕರ್ತರು ಮತ್ತು ಪ್ರಗತಿಪರ ಚಿಂತಕರಾದ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸ್ ಅವರ ಚಿಂತಕರ ಚಾವಡಿಯಲ್ಲಿದ್ದ ಕಲ್ಲೆ ಅವರು ಅರಸು ಅವರ ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳ ಹಿಂದಿನ ಪ್ರೇರಕಶಕ್ತಿಯಾಗಿದ್ದರು. ಕಲ್ಲೆ ಅವರು ಸಂಪಾದಕರಾಗಿದ್ದ ಆಗಿನ ಜನಪ್ರಿಯ ವಾರಪತ್ರಿಕೆ ‘ಜನಪ್ರಗತಿ’ ನಾಡಿನ ರಾಜಕೀಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಮುಖವಾಣಿಯಾಗಿತ್ತು. ನಾಡಿನ ಅನೇಕ ಪ್ರಮುಖ ಸಾಹಿತಿಗಳ ಪ್ರಾರಂಭದ ದಿನಗಳ ಕತೆ-ಕವನ-ಲೇಖನಗಳು ಈ ಪತ್ರಿಕೆಯಲ್ಲಿಯೇ ಪ್ರಕಟವಾಗಿತ್ತಿತ್ತು. ಪ್ರಜಾವಾಣಿ ಪತ್ರಿಕೆಯಲ್ಲಿಯೂ ಕಲ್ಲೆ ಅವರು ಸ್ವಲ್ಪಕಾಲ ಕೆಲಸ ಮಾಡಿದ್ದರು. ಹಿಂದುಳಿದ ಸಮುದಾಯಕ್ಕೆ ಸೇರಿರುವ ಕಲ್ಲೆ ಶಿವೋತ್ತಮ್ ರಾವ್ ಅವರು ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ ಕಲ್ಲೆ ಅವರಿಗೆ ಆರೋಗ್ಯ ಮತ್ತು ಆಯುಷ್ಯ ಸದಾ ಒದಗಿ ಬರಲಿ ಎಂದು ಹಾರೈಸುತ್ತೇನೆ. (ಮುಖ್ಯಮಂತ್ರಿ ಸಿದ್ದರಾಮಯ್ಯ)










