ಮಡಿಕೇರಿ ನ.21 NEWS DESK : ಸೇವಾ ಭದ್ರತೆಗಳಿಲ್ಲದೆ ಅತ್ಯಂತ ಕಡಿಮೆ ವೇತನಕ್ಕೆ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯ್ತಿ ನೌಕರರ ಮೂಲಭೂತ ಸಮಸ್ಯೆಗಳ ಕುರಿತು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಪ್ರಸ್ತಾಪಿಸಿ, ಸಂಕಷ್ಟzಲ್ಲಿರುವ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ(ಸಿಐಟಿಯು)ನ ಜಿಲ್ಲಾ ಅಧ್ಯಕ್ಷ ಪಿ.ಆರ್.ಭರತ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗಳಲ್ಲಿ ಸುಮಾರು 63 ಸಾವಿರ ಮಂದಿ ಕರ ವಸೂಲಿಗಾರರಾಗಿ, ಡಾಟಾ ಎಂಟ್ರಿ ಆಪರೇಟರ್‍ಗಳಾಗಿ, ಜವಾನರಾಗಿ, ಸ್ವಚ್ಛತಾಕರ್ಮಿಗಳಾಗಿ, ವಾಟರ್‍ಮೆನ್‍ಗಳಾಗಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಇವರನ್ನು ರಾಜ್ಯ ಸರ್ಕಾರ ಪಂಚಾಯ್ತಿ ನೌಕರರೆಂದು ಪರಿಗಣಿಸಬೇಕು ಮತ್ತು ನಿಗದಿತ ವೇತನ ನೀಡಬೇಕೆಂದು ಆಗ್ರಹಿಸಿದರು. ಕಾರ್ಮಿಕ ಆಯೋಗ ಈಗಾಗಲೆ ಪಂಚಾಯ್ತಿಯಲ್ಲಿ ದುಡಿಯುವ ಕಾರ್ಮಿಕರಿಗೆ 25 ಸಾವಿರ ಕನಿಷ್ಟ ವೇತನ ನೀಡಬಹುದೆಂದು ತಿಳಿಸಿದ್ದು, ಇದರ ಕಡತ ಸೇರಿದಂತೆ ಪಂಚಾಯ್ತಿ ನೌಕರರ ಬೇಡಿಕೆಗಳ ಮನವಿಗಳು ಮುಖ್ಯ ಮಂತ್ರಿಗಳ ಬಳಿಯಲ್ಲಿದೆ. ಈಗಾಗಲೆ ವಿಷಯಕ್ಕೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಸಚಿವರಿಗೆ ಮನವಿ ನೀಡಿ, ಅವರೊಂದಿಗೆ ಚರ್ಚಿಸಲಾಗಿದೆ. ಹೀಗಿದ್ದೂ, ಅವರು ನೀಡಿದ ಆಶ್ವಾಸನೆಗಳು, ಭರವಸೆಗಳಾವುದು ಕಾರ್ಯರೂಪಕ್ಕೆ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಅಧಿಕ ಆದಾಯ ಇರುವ ಗ್ರಾಮ ಪಂಚಾಯ್ತಿಗಳು ತಮ್ಮ ಸ್ವಂತ ಬಂಡವಾಳದಿಂದ ಪಂಚಾಯ್ತಿ ನೌಕರರಿಗೆ ಕನಿಷ್ಟ ವೇತನ ನೀಡಬಹುದಾಗಿದೆ. ಆದರೆ, ಕೊಡಗಿನಲ್ಲಿರುವ 103 ಪಂಚಾಯ್ತಿಗಳಲ್ಲಿ ಹೆಚ್ಚಿನ ಆದಾಯ ಇರುವ ಪಂಚಾಯ್ತಿಗಳ ಸಂಖ್ಯೆ ಕೇವಲ 22 ಮಾತ್ರವೆಂದು ತಿಳಿಸಿ, ಪ್ರಸ್ತುತ ಸರ್ಕಾರ ಗ್ರಾಮ ಪಂಚಾಯ್ತಿ ನೌಕರರ ಹಸಿವಿನ ಬಗ್ಗೆ ಕನಿಷ್ಟ ಕಾಳಜಿ ತೋರದ ಪರಿಸ್ಥಿತಿ ಇರುವುದಾಗಿ ತಿಳಿಸಿದರು. :: ಮೈಸೂರಿನ ಸಿಎಂ ಮನೆಗೆ ಭೇಟಿ :: ಗ್ರಾಮ ಪಂಚಾಯ್ತಿ ನೌಕರರ ಪ್ರಮುಖ ಬೇಡಿಕೆಗಳ ಬಗ್ಗೆ ಮಗದೊಮ್ಮೆ ಸರ್ಕಾರದ ಗಮನ ಸೆಳೆಯುವ ಭಾಗವಾಗಿ ನ.29 ರಂದು ಮುಖ್ಯ ಮಂತ್ರಿಗಳ ಮೈಸೂರಿನಲ್ಲಿರುವ ಅವರ ಮನೆಗೆ ಕೊಡಗು, ಚಾಮರಾಜನಗರ, ಮಂಡ್ಯ ವಿಭಾಗದ ಪಂಚಾಯ್ತಿ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಭೇಟಿ ನೀಡಲಿರುವುದಾಗಿ ತಿಳಿಸಿದರು. :: ಡಿ.21 ರಂದು ವಿಧಾನ ಸೌಧ ಚಲೋ :: ಗ್ರಾಪ ಪಂಚಾಯ್ತಿ ನೌಕರರ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಂದಿನ ಡಿ.21 ರಂದು ವಿಧಾನ ಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೆಂದು ಪಿ.ಆರ್.ಭರತ್ ಮಾಹಿತಿ ನೀಡಿದರು. :: ಬಿಪಿಎಲ್ ತಡೆಗೆ ವಿರೋಧ :: ಗ್ರಾಮ ಪಂಚಾಯ್ತಿ ನೌಕರರ ಬಿಪಿಎಲ್ ಕಾರ್ಡ್‍ಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿಸಿರುವುದಾಗಿ ತಿಳಿಸಿದ ಅವರು, ಪಂಚಾಯ್ತಿ ನೌಕರರ ಆದಾಯದ ಮಿತಿಯನ್ನು, ಅವರಿಗೆ ನೀಡಲು ಉದ್ದೇಶಿರುವ ಕನಿಷ್ಟ ವೇತನವನ್ನು ಮಾನದಂಡವನ್ನಾಗಿಸಿಕೊಂಡು ನಿಗದಿಪಡಿಸಬೇಕು ಮತ್ತು ಕಾರ್ಮಿಕರ ಆದಾಯದ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. :: ಕೊಡಗಿನಲ್ಲಿ 250 ಹುದ್ದೆಗಳು ಖಾಲಿ :: ಕೊಡಗಿನ 103 ಗ್ರಾಮ ಪಂಚಾಯ್ತಿಗಳಲ್ಲಿ ಪಂಚಾಯ್ತಿ ನೌಕರರ 250 ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಸೋಮವಾರಪೇಟೆ ತಾಲ್ಲೂಕಿನ ನಾಕೂರು ಶಿರಂಗಾಲ, ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಕಾರ್ಮಾಡು, ಚೆಂಬೆಬೆಳ್ಳೂರು ಪಂಚಾಯ್ತಿಗಳಲ್ಲಿ ಪಂಚಾಯ್ತಿ ನೌಕರರೆ ಇಲ್ಲದ ಪರಿಸ್ಥಿತಿ ಇದೆ. ಇದರಿಂದ ಅಲ್ಲಿ ಇರುವ ಉದ್ಯೋಗಿಗಳ ಮೇಲೆ ಹೆಚ್ಚಿನ ಕೆಲಸದ ಒತ್ತಡ ಬೀಳುತ್ತಿರುವುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ(ಸಿಐಟಿಯು)ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಸೂದನ್, ಉಪ ಕಾರ್ಯದರ್ಶಿ ದಿಲೀಪ್ ಕುಮಾರ್, ಉಪಾಧ್ಯಕ್ಷರಾದ ಎ.ಮಹದೇವ್, ಪಿ.ರಂಗಸ್ವಾಮಿ ಹಾಗೂ ವಿರಾಜಪೇಟೆ ತಾಲ್ಲೂಕು ಪದಾಧಿಕಾರಿ ಎಂ.ಎಸ್.ಸೌಮ್ಯ ಉಪಸ್ಥಿತರಿದ್ದರು.











