ಮಡಿಕೇರಿ ನ.21 NEWS DESK : ಹದಿನೈದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ಸೈನಿಕ ಪಿಂಚಣಿ ವಂಚಿತರಾದವರಿಗೂ ‘ಪಿಂಚಣಿ ಸೌಲಭ್ಯ’ವಿದ್ದು, ಇದನ್ನು ಪಡೆದುಕೊಳ್ಳುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಗೌರವ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸೈನ್ಯದಲ್ಲಿ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪಿಂಚಣಿ ಸೌಲಭ್ಯ ದೊರಕುವುದಿಲ್ಲ. ಇಂದಿಗೂ ಪಿಂಚಣಿ ಸೌಲಭ್ಯ ಇಲ್ಲದ ಹದಿನೈದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಇಲ್ಲವೆ ವಿಧವೆಯರು ಈ ಸೌಲಭ್ಯವನ್ನು ಹೊಂದಿಕೊಳ್ಳಲು ಅವಕಾಶವಿದೆ. ಈ ಪಿಂಚಣಿ ಯೋಜನೆಯಡಿ 8 ಸಾವಿರ ರೂ.ಗಳನ್ನು ಮಾಸಿಕ ಪಡೆಯಲು ಅವಕಾಶವಿದೆಯೆಂದು ಮಾಹಿತಿಯನ್ನಿತ್ತರು. ಯೋಜನೆಯಡಿ ಸೌಲಭ್ಯ ಪಡೆಯಲು ಬಯಸುವವರ ಆದಾಯ ವಾರ್ಷಿಕ 80 ಸಾವಿರ ರೂ. ಒಳಗಿರಬೇಕು ಮತ್ತು 4 ಏಕರೆಗಿಂತ ಹೆಚ್ಚಿನ ಜಮೀನು ಹೊಂದಿರಬಾರದೆನ್ನುವ ನಿಯಮವಿರುವುದಾಗಿಯೂ ಮಾಹಿತಿ ನೀಡಿದರು. ಹದಿನೈದು ವರ್ಷಕ್ಕಿಂತ ಕಡಿಮೆ ಸೈನ್ಯದ ಸೇವೆ ಸಲ್ಲಿಸಿ ನಿವೃತ್ತರಾಗಿ ಸೈನ್ಯದ ಪಿಂಚಣಿಯಿಂದ ವಂಚಿತರಾಗಿರುವವರು ಸೈನಿಕ ಬೋರ್ಡ್ ಮೂಲಕ ಪಿಂಚಣಿ ಸೌಲಭ್ಯ ಪಡೆಯಲು ಅವಕಾಶವಿದೆ. ಇದಕ್ಕಾಗಿ ಆಸಕ್ತರು ಡಿಸ್ಚಾರ್ಜ್ ಸರ್ಟಿಫಿಕೇಟ್, ಸೈನಿಕ ಬೋರ್ಡ್ ಐಡಿ ಕಾರ್ಡ್, ಆಧಾರ್, ಪ್ಯಾನ್, ಆದಾಯ ದೃಢೀಕರಣ ಪತ್ರ ದಾಖಲಾತಿಗಳೊಂದಿಗೆ ಸೈನಿಕ ಬೋರ್ಡ್‍ನ್ನು ಸಂಪರ್ಕಿಸುವಂತೆ ತಿಳಿಸಿ, ಹೆಚ್ಚಿನ ಮಾಹಿತಿಗಾಗಿ ತನ್ನ ಮೊ.9448447158 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. :: ಮಾಹಿತಿಯ ಕೊರತೆ :: ಈ ಪಿಂಚಣಿ ಹಿಂದಿನಿಂದಲೂ ಜಾರಿಯಲ್ಲಿದ್ದರು ಬಹಳಷ್ಟು ಮಾಜಿ ಸೈನಿಕರಿಗೆ ಇದರ ಕುರಿತಾದ ಮಾಹಿತಿ ಇಲ್ಲದೆ, ಪಿಂಚಣಿಯಿಂದ ವಂಚಿತರಾಗಿದ್ದಾರೆ. ಇನ್ನಾದರು ಇದರ ಸೌಲಭ್ಯ ಹೊಂದಿಕೊಳ್ಳುವಂತೆ ಮನವಿ ಮಾಡಿದರು. :: ಕಡುಬಡವರಿಗೆ ನೆರವು :: ಸೈನಿಕ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರುವ ಕಡುಬಡವರಾದ ಮಾಜಿ ಸೈನಿಕರ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಲ್ಲಿ, ಅವರಿಗೆ ಗದಗ್‍ನ ದೇವಪ್ರಭು ಎಂಬವರು ಧನ ಸಹಾಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಧನ ಸಹಾಯ ಬಯಸುವ ಕಡುಬಡವರಾದ ಮಾಜಿ ಸೈನಿಕರು ಮೊ.8660737534 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಸಂಚಾಲಕ ತಳೂರು ಕಾಳಪ್ಪ ಉಪಸ್ಥಿತರಿದ್ದರು.











