ಸೋಮವಾರಪೇಟೆ ಡಿ.2 NEWS DESK : ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು, ಪ್ರಸಕ್ತ ವರ್ಷ ಅತೀ ವೃಷ್ಟಿಯಿಂದಾಗಿ ಕಾಫಿ, ಕಾಳುಮೆಣಸು ನಷ್ಟಗೊಂಡಿದ್ದರೂ ಕಾಂಗ್ರೆಸ್ ಸರ್ಕಾರ ಈವರೆಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಅತೀ ವೃಷ್ಟಿಯಿಂದಾಗಿ ಕೃಷಿ ಫಸಲು ನಷ್ಟವಾಗಿದ್ದರೂ ಪರಿಹಾರ ಘೋಷಿಸಿಲ್ಲ. ಮೊನ್ನೆ ಒಂದಷ್ಟು ಪರಿಹಾರ ಘೋಷಣೆ ಮಾಡಿದ್ದರೂ ಕೊಡಗು ಜಿಲ್ಲೆಯನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು. ಸ್ಥಳೀಯ ಅಧಿಕಾರಿಗಳು ಶೇ.30 ಕ್ಕಿಂತ ಕಡಿಮೆ ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ಇದು ಶಾಸಕರುಗಳ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ. ಅಧಿಕಾರಿಗಳಿಗೆ ಸ್ಪಷ್ಟ ಹಾಗೂ ಕಟ್ಟುನಿಟ್ಟಿನ ನಿರ್ದೇಶನ ನೀಡುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಇದರಿಂದಾಗಿ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ನಿಂದ ಬರುವ ನಷ್ಟ ಪರಿಹಾರದಿಂದಲೂ ರೈತರು ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಂಜಿ ಪೂಣಚ್ಚ ಮಾತನಾಡಿ, ಕೃಷಿ ಸಮ್ಮಾನ್ ಯೋಜನೆಯಡಿ ಮೋದಿ ಸರ್ಕಾರ ವಾರ್ಷಿಕ 6 ಸಾವಿರ, ಹಿಂದಿನ ಬಿಜೆಪಿ ಸರ್ಕಾರ ೪ ಸಾವಿರದಂತೆ ಒಟ್ಟು 10 ಸಾವಿರ ಸಹಾಯಧನವನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ರಾಜ್ಯದ ಪಾಲನ್ನು ರದ್ದುಗೊಳಿಸಿದೆ. ರೈತರ ಮಕ್ಕಳ ವಿದ್ಯಾರ್ಥಿ ವೇತನವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದರು. ರೈತರಿಗೆ ಪರಿಹಾರ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವ ಮನವಿ ಪತ್ರವನ್ನು ತಹಶೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪ್ರಮುಖರಾದ ಹರಪಳ್ಳಿ ರವೀಂದ್ರ, ದರ್ಶನ್ ಜೋಯಪ್ಪ, ಮನುಕುಮಾರ್ ರೈ, ಅನಂತ್ ಕುಮಾರ್, ಕವಿತಾ ವಿರೂಪಾಕ್ಷ, ರೂಪ ಸತೀಶ್, ಇಂದಿರಾ, ಇದ್ದರು.











