ವಿರಾಜಪೇಟೆ ಡಿ.2 NEWS DESK : ಹೆಚ್‍ಐವಿ/ ಏಡ್ಸ್ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಅದರ ಸಂಪೂರ್ಣ ನಿಮೂರ್ಲನೆ ಸಾಧ್ಯ ಎಂದು ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ ಡಾ.ಸನತ್ ಕುಮಾರ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿ, ವಿರಾಜಪೇಟೆ ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್, ರೆಡ್ ರಿಬ್ಬನ್ ಘಟಕ, ಯುವ ರೆಡ್ ಕ್ರಾಸ್ ಘಟಕ, ವೈಯಕ್ತಿಕ ಕೌನ್ಸೆಲ್ಲಿಂಗ್ ಘಟಕಗಳ ಸಹಯೋಗದಲ್ಲಿ ಸೆಂಟ್ ಆನ್ಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ-2025 ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಏಡ್ಸ್ ಕುರಿತು ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಘಟಕಗಳು ಅದರ ಜೊತೆಗೆ ರೆಡ್ ರಿಬ್ಬನ್ ಕ್ಲಬ್ ನಂತಹ ಘಟಕಗಳು ಸಮಾಜದಲ್ಲಿ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಎಲ್ಲರಲ್ಲಿ ಜಾಗೃತಿ ಮೂಡಿಸಿದಾಗ ಮಾತ್ರ ಅದರ ನಿರ್ಮೂಲನೆ ಸಾಧ್ಯ ಎಂದರು. ಯುವ ಜನತೆಯು ತಾವು ಜಾಗೃತರಾಗುವ ಜೊತೆಗೆ ಬೇರೆಯವರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು. ಏಡ್ಸ್ ನ ಆರಂಭಿಕ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನಾವುಗಳು ಜಾಗೃತರಾದಾಗ ಮಾತ್ರ ಸಮಾಜದಲ್ಲಿ ಇತರರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೆಂದರು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಗೃತಿಯನ್ನು ಮೂಡಿಸಿ ಎಂದು ಕರೆಕೊಟ್ಟರು. ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ಮಾತನಾಡಿ, ಪ್ರತಿಯೊಬ್ಬರೂ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಜೀವಿಸಬೇಕು. ಮನುಷ್ಯನು ಯೋಚನಾ ಶಕ್ತಿಯನ್ನು ಹೊಂದಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಾವು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನು ಮರೆಯಬಾರದು. ಉತ್ತಮ ಸಮಾಜಮುಖಿ ಚಟುವಟಿಕೆಗಳಿಂದ ಜೀವನವನ್ನು ನಡೆಸಬೇಕು. ಏಡ್ಸ್ ಕುರಿತು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹತ್ತು ಹಲವು ಜಾಗೃತ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತಿದ್ದು, ಪ್ರತಿಯೊಬ್ಬರಲ್ಲಿಯೂ ಅದರ ಅರಿವು ಅತಿ ಮುಖ್ಯ ಎಂದರು. ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನಿತಾ ಮುತ್ತಣ್ಣ ಮಾತನಾಡಿ, ಉತ್ತಮ ಆರೋಗ್ಯದಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗುತ್ತದೆ. ಜಿಲ್ಲಾದ್ಯಂತ ಪದವಿ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್ ನ ಘಟಕಗಳಿದ್ದು, ಆ ಘಟಕಗಳ ಮುಖಾಂತರ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಜೊತೆಗೆ ಸಾರ್ವಜನಿಕ ಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ. ಜೀವನ ಕೌಶಲ್ಯಕ್ಕೆ ಸಂಬಂಧಿಸಿದಂತಹ ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರಲ್ಲಿಯೂ ಏಡ್ಸ್ ಕುರಿತು ಸ್ವ ಜಾಗೃತಿ ಮೂಡಬೇಕು. ವಿಶೇಷವಾಗಿ ಸರ್ವರಲ್ಲಿಯೂ ಅರಿವನ್ನು ಮೂಡಿಸುವ ಕಾರ್ಯ ಯುವಜನರಲ್ಲಿದೆ. ತಾವು ಸ್ವ ಜಾಗೃತರಾಗಿ ಹಾಗೂ ಇತರರಲ್ಲಿ ಜಾಗೃತಿಯನ್ನು ಮೂಡಿಸಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಏಡ್ಸ್ ಕುರಿತು ಜಾಗತಿಕವಾಗಿಯೇ ಇಂದು ಆರೋಗ್ಯ ಸಂಸ್ಥೆಗಳಿಂದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ನಮ್ಮ ಆರೋಗ್ಯವನ್ನು ಉತ್ತಮವಾಗಿಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜೊತೆಗೆ ಸಮುದಾಯದಲ್ಲಿಯೂ ಸಹ ಜಾಗೃತಿ ಮೂಡಿಸಬೇಕಿದೆ. ವಿಶ್ವದಾದ್ಯಂತ ಇದರ ಕುರಿತು ಜಾಗೃತಿ ಮೂಡಿದಾಗ ಮಾತ್ರ ಜಾಗತಿಕ ಮಟ್ಟದಿಂದಲೇ ಏಡ್ಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು. ರೆಡ್ ರಿಬ್ಬನ್ ಕ್ಲಬ್ ನಂತಹ ಘಟಕಗಳು ಆ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವಂತಹ ಕಾರ್ಯವನ್ನು ಮಾಡುತ್ತಿದೆ ಎಂದರು. ಕಾಲೇಜಿನ ಎನ್ಎಸ್ಎಸ್ ಘಟಕದ ಅಧಿಕಾರಿ ಬಿ.ಎನ್.ಶಾಂತಿಭೂಷಣ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ಚಿಟ್ಟಿಯಪ್ಪ, ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗದ ಆಪ್ತಸಮಾಲೋಚಕರಾದ ಚಂದ್ರಶೇಖರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರತಿಮ ಹರೀಶ್ ರೈ ಸ್ವಾಗತಿಸಿದರು, ಎನ್ಎಸ್ಎಸ್ ಘಟಕದ ವಿದ್ಯಾರ್ಥಿನಿ ಮೇಘನಾ ನಿರೂಪಿಸಿದರು, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ ವಂದಿಸಿದರು. :: ಏಡ್ಸ್ ಜಾಗೃತಿ ಜಾಥಾ :: ವಿಶ್ವ ಏಡ್ಸ್ ದಿನಾಚರಣೆ 2025ರ ಕುರಿತು ಜರುಗಿದ ಸಭಾ ಕಾರ್ಯಕ್ರಮ ಮೊದಲು ಸೆಂಟ್ ಆನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಏಡ್ಸ್ ಜಾಗೃತಿ ಜಾಥಾದಲ್ಲಿ ಸಂಚರಿಸಿದರು. ಜಾಥಾಕ್ಕೆ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ.ಮದಲೈ ಮುತ್ತು ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಚಾಲನೆ ನೀಡಿದರು. ಜಾಗೃತಿ ಜಾಥಾವು ಕಾಲೇಜಿನಿಂದ ಆರಂಭವಾಗಿ ನಗರದ ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ, ಕೆ ಎಸ್ ಆರ್ ಟಿ ಸಿ ನಿಲ್ದಾಣ, ಚೌಕಿ ಮುಖಾಂತರ ಸಾಗಿ ಮೂರ್ನಾಡು ರಸ್ತೆಯ ಮೂಲಕ ಕಾಲೇಜಿನಲ್ಲಿ ಸಮಾಪ್ತಿಗೊಂಡಿತು. ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಸೂಚನಾ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ್, ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ವಿಲೀನ, ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕರಾದ ಚಿಟ್ಟಿಯಪ್ಪ, ಚಂದ್ರಶೇಖರ್, ಸೆಂಟ್ ಆನ್ಸ್ ಕಾಲೇಜಿನ ಉಪನ್ಯಾಸಕರಾದ ಜೇಮ್ಸ್ ಆಂಟೋನಿ ಉಪಸ್ಥಿತರಿದ್ದರು. ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ರವರ ನೇತೃತ್ವದಲ್ಲಿ ಸಂಚಾರಿ ವ್ಯವಸ್ಥೆಯನ್ನು ನಿರ್ವಹಿಸಿ ಜಾಥಾಕ್ಕೆ ಅನುವು ಮಾಡಿಕೊಡಲಾಯಿತು.











