ನಾಪೋಕ್ಲು ಡಿ.3 NEWS DESK : ಕೊಡಗು ಸಂಪದ್ಭರಿತವಾದ ಕೃಷಿ, ಪ್ರವಾಸೋದ್ಯಮ ಹೊಂದಿದ್ದು, ಇದರಲ್ಲಿ ವಿಪುಲ ಅವಕಾಶ ಇರುವುದರಿಂದ ಮಕ್ಕಳು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಜಿಲ್ಲೆ ಬಿಟ್ಟು ಹೋಗುವ ಅವಶ್ಯಕತೆ ಇಲ್ಲ ಎಂದು ಪೊನ್ನಂಪೇಟೆ ಅರಣ್ಯ ವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡಿರ ಜಿ. ಕುಶಾಲಪ್ಪ ಅವರು ಹೇಳಿದರು. ಮೂರ್ನಾಡಿನ ಮಾರುತಿ ವಿದ್ಯಾ ಸಂಸ್ಥೆಯ 42ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ತಂದೆಯ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ತಾಯಿಯ ತ್ಯಾಗವನ್ನು ಅರಿತು ಮುನ್ನಡೆಯಬೇಕು ಎಂದ ಅವರು ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದನ್ನು ಈಡೇರಿಸುವ ದಿಶೆಯಲ್ಲಿ ನಿರಂತರ ಕನಸು ಕಾಣುವಂತಾಗಬೇಕೆಂದು ಹೇಳಿದರು. ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪಿಯುಸಿ ಹಂತದಲ್ಲಿ ತಮ್ಮ ಮುಂದಿನ ಗುರಿಗೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಪ್ರಾಮಾಣಿಕ ಪ್ರಯತ್ನವೂ ಇರಬೇಕು. ಎಲ್ಲಾ ಕ್ಷೇತ್ರದಲ್ಲೂ ವಿಪುಲ ಅವಕಾಶವಿರುವುದರಿಂದ ಯಾರು ಕೂಡ ಇಂದು ನಿರುದ್ಯೋಗಿ ಎನ್ನುವಂತಿಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಮುಂಡಂಡ ಕೆ.ಅಪ್ಪಚ್ಚು, ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ಶ್ರದ್ಧೆ ಮತ್ತು ಮಾನವೀಯ ಮೌಲ್ಯಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ದೇಶದ ಸತ್ಪ್ರಜೆಗಳಾಗುವಂತೆ ಕರೆ ನೀಡಿ ವಿದ್ಯಾಸಂಸ್ಥೆಯ ಬೆಳವಣಿಗೆಗೆ ಸಹಕರಿಸುವ ಎಲ್ಲಾ ಪೋಷಕರಿಗೆ ಕೃತಜ್ಞತೆಯನ್ನು ಹೇಳಿದರು. ಪ್ರಾಂಶುಪಾಲೆ ಸುಮಿತ ವಾರ್ಷಿಕ ವರದಿಯನ್ನು ಮಂಡಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಚೇಂದ್ರಿಮಡ ಗಿಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಬಡುವಂಡ ಅರುಣ್ ಅಪ್ಪಚ್ಚು, ನಿರ್ದೇಶಕರಾದ ಮುಂಡಂಡ ನೀಲವ್ವ ಮುತ್ತಣ್ಣ, ಬಡುವಂಡ ನೀಲಮ್ಮ ಮುತ್ತಪ್ಪ, ಚೇಂದ್ರಿಮಡ ರೂಪ ಸೋಮಯ್ಯ, ಉಪ ಪ್ರಾಂಶುಪಾಲೆ ಹೇಮಾವತಿ, ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಲಿಂಚನ ತಂಡದವರು ಪ್ರಾರ್ಥಿಸಿದರು. ರಿತೇಶ್ ಸ್ವಾಗತಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ನಡೆಸಲಾದ ಹಲವಾರು ರೀತಿಯ ಸ್ಪರ್ಧೆಗಳು, ಕ್ರೀಡೆ ಮತ್ತು ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಪ್ರೀನರ್ಸರಿ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು. ಒಂದನೇ ತರಗತಿಯಿಂದ ಪಿಯುಸಿ ಯವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಳ್ಳುವಂತಿತ್ತು. ರುದ್ರಾ ಕಿಶೋರ್ ಮತ್ತು ಹಬೀಬಾ ಕಾರ್ಯಕ್ರ ನಿರೂಪಿಸಿದರರು. ಲನ ಚೊಂದಮ್ಮ ವಂದಿಸಿದರು.
ವರದಿ : ದುಗ್ಗಳ ಸದಾನಂದ.











