ವಿರಾಜಪೇಟೆ ಡಿ.9 NEWS DESK : ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವಿರಾಜಪೇಟೆ ಘಟಕ ಹಾಗೂ ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಸಹಯೋಗದೊಂದಿಗೆ ನಡೆದ ಕ್ರಿಸ್ಮಸ್ ಗಾನ ತರಂಗ- 2025 ಗಾಯನ ಸ್ಪರ್ಧೆಯು ನಡೆಯಿತು. ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯ ಸಭಾಂಗಣದಲ್ಲಿ ನಡೆದ ಕ್ರಿಸ್‍ಮಸ್ ಋತುವಿನ ಸಂತೋಷ ಮತ್ತು ಸದ್ಭಾವನೆಯನ್ನು ಆಚರಿಸಲು, ಕ್ಯಾರೋಲ್‍ಗಳ ಮೂಲಕ ಪ್ರೀತಿ, ಶಾಂತಿ ಮತ್ತು ಏಕತೆಯ ಸಂದೇಶಗಳನ್ನು ಹರಡಲು ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿರಾಜಪೇಟೆ ವಲಯದ ಶ್ರೇಷ್ಠ ಗುರುಗಳಾದ ಫಾ. ಜೇಮ್ಸ್ ಡೊಮೇನಿಕ್ ಧ್ವಜಾರೋಹಣ ನೆರವೇರಿಸಿ, ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ರೆ.ಫಾ. ಎಸ್.ಜೆ.ಪ್ರಾನ್ಸಿಸ್ ಸೆರಾವೋ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಡಿಸೆಂಬರ್ ಬಂತೆಂದರೆ ಸಾಕು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹುರುಪು ಎಲ್ಲರಲ್ಲೂ ಮನೆಮಾಡಿರುತ್ತದೆ. ಕ್ರಿಶ್ಚಿಯನ್ ಬಾಂಧವರು ಒಗ್ಗೂಡಿ ಆಚರಿಸುವ ಕ್ರಿಸ್ಮಸ್ ವಿಶ್ವಕ್ಕೆ ಸಮಾನತೆ ಹಾಗೂ ಸಾರ್ಥಕತೆಯ ಪಾಠವನ್ನು ಮಾಡುತ್ತದೆ. ಕ್ರಿಸ್ಮಸ್ ಶಾಂತಿ ಸಮಾಧಾನವನ್ನು ಸಾರುವ ಹಬ್ಬವಾಗಿದ್ದು ಜಗತ್ತಿಗೆ ಒಗ್ಗಟ್ಟಿನ ಬಲವನ್ನು ಸಾರುತ್ತದೆ. ಇಂತಹ ಒಂದು ಸಮಯದಲ್ಲಿ ಸಂಸ್ಥೆಯ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಾ, ಸಮಾಜದಲ್ಲಿ ಕಷ್ಟದಲ್ಲಿ ಬದುಕುತ್ತಿರುವ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಆರ್ಥಿಕವಾಗಿ ಸಹಾಯ ಒದಗಿಸುವ ಸೇವೆ ನಿಜವಾಗಲೂ ಶ್ಲಾಘನೀಯ. ಇಲ್ಲಿ ಎಲ್ಲರೂ ಒಂದಾಗಿ ಬಾಳಲು ಪಣ ತೊಡಬೇಕು. ಇವ ನಮ್ಮವ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅರಾಟ್ ಗ್ರೂಪ್ ಎಂ.ಡಿ.ಟೋನಿ ವಿನ್ಸೆಂಟ್ ಮಾತನಾಡಿ, ಕ್ರಿಸ್ಮಸ್ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷವನ್ನು ನೀಡುವ ಮತ್ತು ತರುವ ಆಚರಣೆಯಾಗಿದೆ. ದಾನ ಮಾಡುವ ಮೂಲಕ ಕೃತಜ್ಞರಾಗಿರಬೇಕು ಮತ್ತು ಉದಾರವಾಗಿರಬೇಕೆಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಇತರರಿಗೆ ಸಹಾಯ ಮಾಡುವ ಮಹತ್ವವನ್ನು ನೆನಪಿಸುತ್ತದೆ. ಈ ನಿಟ್ಟಿನಲ್ಲಿ ಕಾರ್ಯೊನ್ಮೂಖವಾಗಿರುವ ಸಂಸ್ಥೆಯ ಕಾರ್ಯ ಮೆಚ್ಚುವಂತಹದ್ದು. ಮುಂದಿನ ದಿನಗಳಲ್ಲಿ ಸಂಸ್ಥೆಯ ಮೂಲಕ ಸಮಾಜಮುಖಿ ಕಾರ್ಯಗಳು ಹೆಚ್ಚು ನಡೆಯಲಿ ಎಂದು ಶುಭ ಹಾರೈಸಿದರು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಆಂಟೋನಿ ರಾಬಿನ್ ಮಾತನಾಡಿ, ಹದಿನೈದು ವರ್ಷಗಳಿಂದ ಸಮುದಾಯದ ಒಗ್ಗಟ್ಟಿಗೆ ಹಾಗೂ ನಮ್ಮ ಸಂಸ್ಕøತಿಯ ಆಚರಣೆಯಲ್ಲಿ ತೊಡಗಿಸಿಕೊಳ್ಳಲು ಈ ಸಂಸ್ಥೆ ಶ್ರಮಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಕ್ರಿಸ್‍ಮಸ್ ಗಾಯನ ಸ್ಫರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಸಮುದಾಯದ ಐಕ್ಯತೆ, ಚರ್ಚ್ ಕಾನ್ವೆಂಟ್‍ಗಳಲ್ಲಿರುವ ಮಕ್ಕಳು, ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೇವೆ. ಇದರೊಂದಿಗೆ ಸಮಾಜಸೇವೆಯು ನಮ್ಮ ಗುರಿಯಾಗಿದೆ ಎಂದರಲ್ಲದೆ ಕ್ರಿಸ್ಮಸ್ ಹಬ್ಬದಾಚರಣೆ ಏಸುವಿನ ಜನ್ಮದಿನವನ್ನು ಆಚರಿಸುವುದರೊಂದಿಗೆ ಜನಾಂಗ ಬಾಂಧವ್ಯ ಸ್ಥಾಪಿಸುವುದು, ಉಡುಗೊರೆಗಳ ವಿನಿಮಯ ಹಾಗೂ ಬಂಧು ಬಾಂಧವರೆಲ್ಲರೂ ಸೇರಿ ಐಕ್ಯತೆ ಸಾರುವುದಾಗಿದೆ ಎಂದರು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಐಸಿಸಿ ಉಪಾಧ್ಯಕ್ಷ ಡಿ.ಕೆ.ಬ್ರಿಜೇಶ್ ಹಾಗೂ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮದಲೈಮುತ್ತು ಮಾತನಾಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮ ನಡೆಸಲು ಇದು ಪ್ರೇರಣೆಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಧರ್ಮ ಗುರುಗಳಾದ ಜೇಮ್ಸ್ ಡೊಮೆನಿಕ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ರಾಡ್ರಿಗಸ್, ರೋಮನ್ ಕ್ಯಾಥೋಲಿಕ್ ಅಸೋಸಿಯೇೀಷನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ, ರೋಮನ್ ಕ್ಯಾತೋಲಿಕ್ ಅಸೋಸಿಯೇಷನ್ ತಾಲೂಕು ಉಪಾಧ್ಯಕ್ಷ ಆಂತೋನಿ ಜೋಸೆಫ್, ಕಾರ್ಯದರ್ಶಿ ಸ್ಟಾಲಿನ್, ದಿನೇಶ್ ಮತಿಯಾಸ್, ಸಹಾಯಕ ಧರ್ಮಗುರು ಅಭಿಲಾಷ್, ಕೊಡಗಿನ ವಿವಿಧ ಭಾಗಗಳ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಹಾಗೂ ಕಾರ್ಯಕ್ರಮಕ್ಕೆ ಕೈಜೋಡಿಸಿದವರಿಗೆ ಸನ್ಮಾನಿಸಲಾಯಿತು.











