

ಮಡಿಕೇರಿ ಏ.1 NEWS DESK : ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸಹಕಾರದೊಂದಿಗೆ ಮಡಿಕೇರಿ ಯೂತ್ ಕ್ರಿಕೆಟ್ ಕ್ಲಬ್(ಎಂವೈಸಿಸಿ) ವತಿಯಿಂದ ವಿವಿಧ ವಯೋಮಿತಿಯ ಮಂಗಳೂರು ವಿಭಾಗದ ಕೊಡಗು ಕ್ರಿಕೆಟ್ ತಂಡಗಳ ರಚನೆಗೆ ಪ್ರತಿಭಾವಂತ ಆಟಗಾರರ ಆಯ್ಕೆ ಪ್ರಕ್ರಿಯೆ ಏ.6 ಮತ್ತು 7 ರಂದು ಮರಗೋಡು ಶಾಲಾ ಮೈದಾನದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಂವೈಸಿಸಿ ಅಧ್ಯಕ್ಷ ಪೊನ್ನಚ್ಚನ ಮಧು ಸೋಮಣ್ಣ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ, ಬಾಲಕರ 14, 16 ಮತ್ತು 19 ವರ್ಷದೊಳಗಿನ ತಂಡಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ಏ.6 ರಂದು ನಡೆಯಲಿದ್ದು, ಬಾಲಕಿಯರ 15 ಮತ್ತು 19 ವರ್ಷದೊಳಗಿನ ತಂಡಗಳ ಆಯ್ಕೆ ಪ್ರಕ್ರಿಯೆ ಏ.7 ರಂದು ನಡೆಯಲಿದೆ. ಆಯ್ಕೆ ಪ್ರಕ್ರಿಯೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆಯೆಂದು ತಿಳಿಸಿದರು. ಶಾಲಾ ಪರೀಕ್ಷೆಗಳ ಹಿನ್ನೆಲೆ ಪ್ರತಿಭಾವಂತರು ಆಯ್ಕೆಯಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಬಾಲಕರ 14 ವರ್ಷದೊಳಗಿನ ಆಯ್ಕೆಯಲ್ಲಿ ಆರಂಭಿಕ ದಿನದಂದು ಪಾಲ್ಗೊಳ್ಳಲು ಸಾಧ್ಯವಾಗದವರಿಗೆ ಏ.17 ರಂದು ಅವಕಾಶವನ್ನ ನೀಡಲಾಗುತ್ತದೆಂದು ಪೊನ್ನಚ್ಚನ ಮಧು ಮಾಹಿತಿ ನೀಡಿದರು. ಬಾಲಕರ ಮೂರು ವಿಭಾಗ ಮತ್ತು ಬಾಲಕಿಯರ ಎರಡು ವಿಭಾಗಗಳ ತಂಡಗಳಿಗೆ ತಲಾ 15 ಮಂದಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಬೆಂಗಳೂರಿನಿಂದ ಆಗಮಿಸಲಿರುವ ಇಬ್ಬರು ಆಯ್ಕೆದಾರರು, ಮಡಿಕೇರಿಯ ಇಬ್ಬರು ಮತ್ತು ಒಬ್ಬರು ಮಹಿಳಾ ಆಯ್ಕೆದಾರರು ನಡೆಸಿಕೊಡಲಿದ್ದಾರೆ. ತಂಡಕ್ಕೆ ಆಯ್ಕೆಯಾದ ಆಟಗಾರರಿಗೆ ಎರಡು ದಿನಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆಂದು ವಿವರಗಳನ್ನು ನೀಡಿದರು. ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಆಧಾರ್, ಜನ್ಮ ದೃಢೀಕರಣ ಪತ್ರ, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ(19 ವರ್ಷದೊಳಗಿನ ತಂಡದ ಆಯ್ಕೆ)ಯ ಹಾಜರು ಪಡಿಸಬೇಕು ಮತ್ತು ಆಯ್ಕೆಯಲ್ಲಿ ಪಾಲ್ಗೊಳ್ಳಲು ಬಿಳಿ ಸಮವಸ್ತ್ರದೊಂದಿಗೆ ಬ್ಯಾಟ್, ಪ್ಯಾಡ್, ಹೆಲ್ಮೆಟ್‍ಗಳನ್ನು ತರಬೇಕೆಂದು ಸ್ಪಷ್ಟಪಡಿಸಿದರು. ಆಯ್ಕೆಯಾದ ಕೊಡಗಿನ ತಂಡಗಳು ಏ.10 ರಿಂದ 13ರ ವರೆಗೆ ಮಂಗಳೂರಿನಲ್ಲಿ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮಧು ಸೋಮಣ್ಣ ಮೊ.9880381831, ಅಜಯ್ ಮೊ.9945056373 ಯನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಂವೈಸಿಸಿ ಕಾರ್ಯದರ್ಶಿ ಎಂ.ಎಂ.ಸುನಿಲ್, ಖಜಾಂಚಿ ಎ.ಎಂ.ಅಜಯ್(ಡಾಲು), ಉಪಾಧ್ಯಕ್ಷ ಎಂ.ಕೆ.ಪ್ರಿನ್ಸ್ ಕುಟ್ಟಪ್ಪ ಉಪಸ್ಥಿತರಿದ್ದರು.









