
ಮಡಿಕೇರಿ ಏ.13 NEWS DESK : ಅರಮೆರಿ ಲಿಂಗರಾಜೇಂದ್ರ ಪ್ರಸಾದ ಭವನದಲ್ಲಿ ಹೊಂಬೆಳಕು ಕಿರಣ 242 ಮಾಸಿಕ ತತ್ವ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಲೇಖಕಿ ಕೆ.ಜಯಲಕ್ಷ್ಮಿ ಅವರ ‘ನಡೆದಷ್ಟೂ ದಾರಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ, ಶುಭ ಕೋರಿದರಲ್ಲದೆ ಶರಣ ಶರಣೆಯರ ಜೀವನ ಆದರ್ಶ, ವಚನಗಳ ಸಾರ್ವಕಾಲಿಕ ಮೌಲ್ಯಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೆ ಅರಮೇರಿ ಮಠದ ಪರಮಪೂಜ್ಯ ಗುರುಗಳು ನೀಡುತ್ತಾ ಬರುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಉದಾತ್ತ ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿವರಿಸಿತ್ತ ವಾಸ್ತವದಲ್ಲಿ ಬದುಕುವ ಚಿಂತನೆ ಉತ್ತಮ ಎಂದರು. ಪೊನ್ನಂಪೇಟೆ ಸಿ ಐ ಟಿ ಕಾಲೇಜಿನ ಉಪನ್ಯಾಸಕಿ ಸುಶ್ಮಿತಾ ಅವರು ಮಾತನಾಡಿ ಜಯಲಕ್ಷ್ಮಿ ಅವರ ಕೆಲವು ಲೇಖನಗಳ ಬಗ್ಗೆ ಮಾತನಾಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಲೋಕೇಶ್ ಸಾಗರ್, ಸಾಹಿತಿ ಕಿಗ್ಗಾಲ್ ಗಿರೀಶ್, ಡಾ.ಸತೀಶ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಮಿನುಗು ಪ್ರಾರ್ಥಿಸಿದಳು. ಕಿಗ್ಗಾಲ್ ಹರೀಶ್ ನಿರೂಪಿಸಿದರು. ಹೊಂಬೆಳಕು ಕಿರಣ 242 ಮಾಸಿಕ ತತ್ವ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಷಾ ಬೆಳವಣಿಗೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಎನ್ನುವ ವಿಷಯದ ಬಗ್ಗೆ ಕೆ.ಜಯಲಕ್ಷ್ಮಿ ಉಪನ್ಯಾಸ ನೀಡಿದರು.









