
ಮಡಿಕೇರಿ ಮೇ 18 NEWS DESK : ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025 ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಆರು ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿರಾಜಪೇಟೆ ಕ್ಷೇತ್ರದ ಶಾಸಕರಾದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ತಮ್ಮ ತಂದೆ ಎ.ಕೆ. ಸುಬ್ಬಯ್ಯ ಹಾಗೂ ತಾಯಿ ಎ.ಎಸ್. ಪೊನ್ನಮ್ಮ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ರಾಷ್ಟ್ರಮಟ್ಟದ ಫುಟ್ಬಾಲ್ ತೀರ್ಪುಗಾರ ಧೀರಜ್ ರೈ ಶ್ರೀನಿವಾಸ್’ ವರದಿಗೆ ಕೆ.ಎಂ. ಇಸ್ಮಾಯಿಲ್ ಕಂಡಕ್ಕರೆ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಬಿ.ಆರ್. ಸವಿತಾ ರೈ ಅವರು ತಮ್ಮ ತಂದೆ ಕೃಷಿಕರಾಗಿದ್ದ ಬಿ.ಎಸ್. ರಂಗನಾಥ ರೈ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಗೆ ಇಬ್ಬರು ವರದಿಗಾರರು ಜಂಟಿಯಾಗಿ ಆಯ್ಕೆಯಾಗಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ “ಸಮಗ್ರ ಕೃಷಿಯಲ್ಲಿ ಯಶ ಕಂಡ ರೈತ” ವರದಿಗೆ ಪಿ.ವಿ. ಅಂತೋಣಿ ಹಾಗೂ ಟಿ.ವಿ.1 ವಾಹಿನಿಯಲ್ಲಿ ಪ್ರಕಟಗೊಂಡ ’45 ಏಕರೆ ಗದ್ದೆಯಲ್ಲಿ ಭತ್ತ ಬೆಳೆದ ಅನ್ನದಾತ’ ವರದಿಗೆ ಎಂ.ಕೆ. ರವಿಕುಮಾರ್ ಪಡೆದುಕೊಂಡಿದ್ದಾರೆ. ಸಿದ್ದಾಪುರದ ಸಮಾಜ ಸೇವಕರಾದ ಕೆ.ಯು. ಅಬ್ದುಲ್ ಮಜೀದ್ ಅವರು ತಮ್ಮ ತಂದೆ ಉಸ್ಮಾನ್ ಹಾಜಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ಹುಟ್ಟುಹಬ್ಬದ ಉಡುಗೊರೆಯಾಗಿ ಮನೆ ಹಸ್ತಾಂತರಿಸಿದ ಜನಸೇವಕ” ವರದಿಗೆ ಕಿಶೋರ್ ಕುಮಾರ್ ಶೆಟ್ಟಿ ಪಡೆದುಕೊಂಡಿದ್ದಾರೆ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿದ್ದ ಕೋಲತಂಡ ರಘು ಮಾಚಯ್ಯ ಅವರು ತಮ್ಮ ತಂದೆ ಕೋಲತಂಡ ಉತ್ತಪ್ಪ ಹಾಗೂ ತಾಯಿ ಕಾಮವ್ವ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ಮತ್ತು ವನ್ಯಜೀವಿ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ” ವನ್ಯಜೀವಿಗಳ ಆತಂಕದ ನಡುವೆ ರೈತರು-ಕಾರ್ಮಿಕರು: ಕೃಷಿ ಕೆಲಸಕ್ಕೆ ಹಿನ್ನಡೆ” ವರದಿಗೆ ಎ.ಎನ್. ವಾಸು ಪಡೆದುಕೊಂಡಿದ್ದಾರೆ. ವಿರಾಜಪೇಟೆಯ ಪ್ರಗತಿ ಶಾಲೆಯ ಮುಖ್ಯಸ್ಥ ಮಾದಂಡ ಎಸ್. ತಿಮ್ಮಯ್ಯ ಅವರು ತಮ್ಮ ತಾಯಿ ತುಂಗಾ ಪೂವಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯತ್ತಮ ಶೈಕ್ಷಣಿಕ ವರದಿ ಪ್ರಶಸ್ತಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ” ಮರಗೋಡು ವಿದ್ಯಾಸಂಸ್ಥೆಗೆ ಬೀಗ: 62 ವರ್ಷದ ವೈಭವಕ್ಕೆ ತೆರೆ” ವರದಿಗೆ ಆರ್. ಸುಭ್ರಮಣಿ ಪಡೆದುಕೊಂಡಿದ್ದಾರೆ. ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ ಅವರ ಅಧ್ಯಕ್ಷತೆಯಲ್ಲಿ ಮೇ 24 ರಂದು ನಡೆಯುವ ಸಂಘದ ವಾರ್ಷಿಕ ಮಹಾಸಭೆಯ ದಿನದಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಪ್ರಶಸ್ತಿ ಪಡೆದ ಎಲ್ಲಾ ಪತ್ರಕರ್ತ ಮಿತ್ರರಿಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್. ಮುಸ್ತಫ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









