
ಮಡಿಕೇರಿ ಮೇ 23 NEWS DESK : ಕೊಡಗಿನ ಪತ್ರಕರ್ತ ಪ್ರಶಾಂತ್ ವಿರಚಿತ “ಹೊನ್ನಮ್ಮನ ಕನಸು” ಕಾದಂಬರಿ ವಿಶ್ವ ಕನ್ನಡ ಸಮ್ಮೇಳನದ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗೆ ಭಾಜನವಾಗಿದೆ. ಚೇತನ ಪ್ರತಿಷ್ಠಾನ ಹಾಗೂ ಗೋವಾ ಕನ್ನಡಿಗರ ಒಕ್ಕೂಟ ಆಯೋಜಿಸುತ್ತಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಭಾನುವಾರ ಗೋವಾದ ಪಣಜಿಯ ಕಡಲ ತೀರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ. ಖ್ಯಾತ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಡಾ.ರಾಜಶೇಖರ್ ಮಠಪತಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರು, ಸೇರಿದಂತೆ ಹಲವು ಗಣ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪರ್ತಕರ್ತ ಪ್ರಶಾಂತ್ ವಿಶ್ವವಾಣಿ ಪತ್ರಿಕೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊನ್ನಮ್ಮನ ಕನಸು ಕಾದಂಬರಿ ದೃಷ್ಟಿ ಕಳೆದುಕೊಂಡು ವೃದ್ದೆಯೊಬ್ಬರ ಮೂಕರೋಧನೆಯನ್ನು ಒಳಗೊಂಡಿದೆ. ಬಾಳ ಹಾದಿಯಲಿ ಬೆಳ್ಳಿಚುಕ್ಕಿ, ಸೌಪರ್ಣಿಕಾ, ಮೂಕ ಶಾಕುಂತಲೆ ಕಾದಂಬರಿಗಳನ್ನು ರಚಿಸಿದ್ದಾರೆ.










