
ಮಡಿಕೇರಿ NEWS DESK ಜೂ.28 : ಮಡಿಕೇರಿ ಲಯನ್ಸ್ ಕ್ಲಬ್ ನ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಲ್.ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಕೆ.ಮಧುಕರ್, ಖಜಾಂಚಿಯಾಗಿ ಅಂಬೆಕಲ್ ನವೀನ್ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ನಗರದ ಕಾವೇರಿ ಹಾಲ್ ನಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಉಪ ರಾಜ್ಯಪಾಲ ಹಾಗೂ ಶಿಕ್ಷಣ ತಜ್ಞ ಹರಿಪ್ರಸಾದ್ ರೈ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆ ಮಡಿಕೇರಿಯಲ್ಲಿ 61 ವಸಂತಗಳನ್ನು ಪೂರೈಸಿದ್ದು, ಸಾವಿರಾರು ಸಮಾಜಮುಖಿ ಸೇವೆಯ ಮೂಲಕ ತನ್ನದೇ ಛಾಪು ಮೂಡಿಸಿದೆ. ಸಂಸ್ಥೆಯ ನಿಯಮಗಳು, ಹಿರಿಯರ ಮಾರ್ಗದರ್ಶನ, ಸಂಸ್ಥೆಯ ಸಾಮಾಜಿಕ, ಶೈಕ್ಷಣಿಕ ಕಳಕಳಿ ಹಾಗೂ ಮಾನವೀಯ ಗುಣಗಳಿಂದ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಿಕೇರಿ ಲಯನ್ಸ್ ಸಂಸ್ಥೆ ಮತ್ತಷ್ಟು ಸಮಾಜ ಸೇವೆಯ ಮೂಲಕ ಜನರ ಹೃದಯವನ್ನು ಗೆಲ್ಲುವಂತಾಗಬೇಕು. ಆ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಹೆಜ್ಜೆ ಇರಿಸಬೇಕು ಎಂದು ಸಲಹೆ ನೀಡಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಲಯನ್ಸ್ ಸಂಸ್ಥೆ ಬಡ ರಾಷ್ಟ್ರಗಳನ್ನು ದತ್ತು ಪಡೆದು ಅಲ್ಲಿನ ಜನರ ಆರೋಗ್ಯ, ಶಿಕ್ಷಣ ಸಹಿತ ಸಾಮಾಜಿಕ ಬದುಕನ್ನು ಹಸನು ಮಾಡುವ ಕಾರ್ಯಕ್ಕೆ ಕೈ ಹಾಕಿದೆ. ಇಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿರುವುದೇ ಒಂದು ಪುಣ್ಯದ ವಿಚಾರ ಎಂಬುವುದನ್ನು ಎಲ್ಲರೂ ಮನಗಾಣಬೇಕು ಎಂದು ಹೇಳಿದರು. ಮಡಿಕೇರಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಂಡು ಮಾತನಾಡಿದ ಎಲ್.ಮೋಹನ್ ಕುಮಾರ್ ಅವರು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಮಾನವೀಯ ಮೌಲ್ಯ ಮತ್ತು ಸಮಾಜಸೇವೆಯ ಮೂಲಕ ಹಿರಿಯರು ಕಟ್ಟಿದ ಈ ಸಂಸ್ಥೆಯ ಧ್ಯೇಯ, ಉದ್ದೇಶಗಳನ್ನು ಎಲ್ಲರ ಸಹಕಾರದ ಮೂಲಕ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸೇವಾ ಕಾರ್ಯಕ್ಕೆ ಆಧ್ಯತೆ ನೀಡುವ ಮೂಲಕ ಎಲ್ಲರೂ ಸಮಾಜದ ಅಭಿವೃದ್ಧಿಗೆ ಸಂಕಲ್ಪ ತೊಡೋಣ ಎಂದು ಅಭಿಲಾಷೆ ವ್ಯಕ್ತಪಡಿಸಿದರು. ಮಡಿಕೇರಿ ಲಯನ್ಸ್ ನಿರ್ಗಮಿತ ಅಧ್ಯಕ್ಷ ಮದನ್ ಮಾದಯ್ಯ ಅವರು ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಹತ್ತಾರು ಸೇವಾ ಕಾರ್ಯಗಳನ್ನು ಮಾಡಿದ ಆತ್ಮ ತೃಪ್ತಿಯಿದೆ. ಸಂಸ್ಥೆಯ ಸದಸ್ಯತ್ವ ಪಡೆಯುವ ಮೂಲಕ ಸಮಾಜ ಸೇವೆ ಮಾಡಲು ಅವಕಾಶ ದೊರೆತ್ತಿದೆ. ಸರ್ವ ಪದಾಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ, ನೂತನ ಆಡಳಿತ ಮಂಡಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಡಾ.ಪಂಚಮ್ ತಿಮ್ಮಯ್ಯ ಅವರು, ಲಯನ್ಸ್ ಸಂಸ್ಥೆಯ ನೂತನ ಆಡಳಿತ ಮಂಡಳಿಯಲ್ಲಿರುವವರೆಲ್ಲರು ಪ್ರಭಾವಿಗಳು ಹಾಗೂ ಸಮಾಜಮುಖಿಯಾಗಿದ್ದಾರೆ. ಇವರಿಂದ ಮತ್ತಷ್ಟು ಸಮಾಜಿಕ ಸೇವೆ ಮಾಡಲು ಸಾಧ್ಯವಾಗುತ್ತದೆ. ಹಿರಿಯರು, ಅನುಭವಿಗಳು ಹಾಗೂ ಪ್ರಭಾವಿಗಳಿದ್ದಾಗ ಯಾವುದೂ ಅಸಾಧ್ಯ ಎನಿಸಲಾರದು. ಲಯನ್ಸ್ ಸಂಸ್ಥೆಯ ಮೂಲಕ ಅಗತ್ಯವಿದ್ದವರಿಗೆ ನೆರವಿನ ಹಸ್ತಚಾಚುವ ಕಾರ್ಯ ನಿರಂತರವಾಗಿ ಮುಂದುವರೆಯಲಿ ಎಂದು ಕರೆ ನೀಡಿದರು. *ಪ್ರತಿಭಾ ಪ್ರೋತ್ಸಾಹ* ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರತಿಭಾ ಪ್ರೋತ್ಸಾಹದ ಮೂಲಕ ಸನ್ಮಾನಿಸಿ ಗೌರವಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ರ‍್ಯಾಂಕ್ ಪಡೆದ ಲಿನ್ಸಿ ದೇಚಮ್ಮ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಿಂಚನಾ ಪ್ರಸನ್ನ ಅವರುಗಳನ್ನು ಗಣ್ಯರು ಶಾಲು ಹೊದಿಸಿ, ಸನ್ಮಾನಿಸಿದರು. ಶೈಕ್ಷಣಿಕವಾಗಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತೆ ಗಣ್ಯರು ಕಿವಿಮಾತು ಹೇಳಿದರು. ಇದೇ ಸಂದರ್ಭ ಲಯನ್ಸ್ ಉಪ ರಾಜ್ಯಪಾಲ ಹರಿಪ್ರಸಾದ್ ರೈ ಅವರನ್ನು ಮಡಿಕೇರಿ ಲಯನ್ಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಲಯನ್ಸ್ ಕ್ಲಬ್ ಪ್ರಮುಖರಾದ ನಟರಾಜ್ ಕೆಸ್ತೂರ್, ಎಂ.ಎ.ನಿರಂಜನ್, ಕೆ.ಕೆ.ದಾಮೋದರ್, ಜಿ.ಚಿದ್ವಿಲಾಸ್, ಗೀತ ಭಾರತಿರಾಜ್, ಸತ್ಯಭಾಮ, ವಾದಿರಾಜ್ ಸಿ.ಕೆ.ಸೆಲ್ವರಾಜ್, ಹರೀಶ್ ಕೊತಾರಿ, ರವಿ ಪೂಜಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.








