
ಮಡಿಕೇರಿ NEWS DESK ಜೂ.29 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದಿಂದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿವಿಧ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಕಾಲೇಜಿನ ನ್ಯಾಕ್ ಕೊಠಡಿಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಾಂಶುಪಾಲರ ಪೂರ್ಣ ಸಹಕಾರದೊಂದಿಗೆ ಕಳೆದ ಎರಡು ವರ್ಷದಲ್ಲಿ 200ಕ್ಕೂ ಹೆಚ್ಚು ಹೊಸ ಸದಸ್ಯತ್ವವವನ್ನು ಮಾಡಿರುವುದಲ್ಲದೆ, ಕಾಲೇಜಿನ ಅಭಿವೃದ್ಧಿಗಾಗಿ ಹಲವು ಕಾಮಗಾರಿಗಳನ್ನು ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಾಗೂ ಅವರ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು. ಮುಂದಿನ ಎರಡು ತಿಂಗಳಲ್ಲಿ ವಿದ್ಯಾರ್ಥಿಗಳಿಗಾಗಿ ಆರೋಗ್ಯ ತಪಾಸಣೆ ಕಾರ್ಯಕ್ರಮ, ಉದ್ಯೋಗಕ್ಕಾಗಿ ನೇರ ಸಂದರ್ಶನವನ್ನು ಎದುರಿಸಲು ಬೇಕಾದ ತರಬೇತಿ ಕಾರ್ಯಾಗಾರವನ್ನು ನಡೆಸುವಂತೆ ಹಾಗೂ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳವನ್ನು ಹಾಗೂ ಇತರ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ನಡೆಸುವುದಾಗಿ ತಿಳಿಸಿದರು. ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಮಾಡುವಂತೆ ವಿನಂತಿಸಿಕೊಂಡರು. ದಾನಿಗಳ ಮುಖಾಂತರ ಹಳೆ ವಿದ್ಯಾರ್ಥಿಗಳ ಸಂಘದ ಖಾತೆಗೆ ಹಣ ಸಹಾಯವನ್ನು ಪಡೆಯುವಂತೆ ಕೋರಿದರು. ಪ್ರಸ್ತಾವಿಕವಾಗಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ರಾಘವ ಬಿ. ಅವರು, ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಮೈದಾನ ಹಾಗೂ ಕಾಲೇಜಿನ ಸುತ್ತಮುತ್ತಲಿನ ಪ್ರಾದೇಶದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ. ಅಲ್ಲದೆ ಹಲವು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸಿಕೊಟ್ಟಿರುವುದಲ್ಲದೆ, ಎನ್‍ಸಿಸಿ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ರೈಫಲ್ ರೆಂಜ್ ಅನ್ನು ಮಾಡಿಕೊಟ್ಟಿದ್ದು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿನ ಮೂರು ತಿಂಗಳಲ್ಲಿ ಯಾವುದಾದರು ತುರ್ತು ಕಾರ್ಯಕ್ರಮ ನಡೆಸುವ ಅನಿವಾರ್ಯತೆ ಇದ್ದಲ್ಲಿ, ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಈ ಸಭೆಯಲ್ಲಿ ಅನುಮತಿ ನೀಡಬೇಕಾಗಿ ವಿನಂತಿಸಿಕೊಂಡರು. ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ ನವರು 2025-26ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ವರದಿಯನ್ನು ಹಾಗೂ ರೈಫಲ್ ರೇಂಜ್ ಕಾಮಗಾರಿ ಹಾಗೂ ಕಾರ್ಯಕ್ರಮದ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ತೆನ್ನಿರಾ ಟೀನಾ ಚಂಗಪ್ಪನವರು ಹಳೆ ವಿದ್ಯಾರ್ಥಿಗಳ ಸಂಘಕ್ಕೆ ರೂ.5000 ನೀಡಿ ಸಹಕರಿಸಿದರು. ಸಭೆಯಲ್ಲಿ ಸಂಘದ ನಿರ್ದೇಶಕರಾದ ಮಾಗಲು ಲೋಹಿತ್, ಬಿ.ಜಿ.ಹರ್ಷಿತ್, ಎಸ್.ಆರ್.ವತ್ಸಲ, ಕೆ.ಹೆಚ್.ಖುರ್ಷಿದ್ ಬಾನು, ಕೇಲೆಟ್ಟಿರ ದೇವಯ್ಯ, ಆಪಾಡಂಡ ಜಾನ್ಸಿ ಗಣಪತಿ, ಕರವಂಡ ಸೀಮಾ ಗಣಪತಿ, ಪೆಬ್ಬಟ್ಟೀರ ಶೀತಲ್ ಕಾರ್ಯಪ್ಪ, ಚರಣ್ ಬಲ್ಯದ, ಚೀಯಕಪೂವಂಡ ಸಚಿನ್ ಪೂವಯ್ಯ, ಕಾಲೇಜಿನ ಸಿಬ್ಬಂದಿಗಳಾದ ಪವಿತ್ರ, ರೇಷ್ಮ ಹಾಗೂ ಮತ್ತಿತರು ಇದ್ದರು. ಹಳೆ ವಿದ್ಯಾರ್ಥಿಸಂಘ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಸ್ವಾಗತಿಸಿದರು. ಉಪಾಧ್ಯಕ್ಷರಾದ ಬೊಟ್ಟೊಳಂಡ ಗಣಪತಿ ವಂದಿಸಿದರು.









