ಸುಂಟಿಕೊಪ್ಪ, NEWS DESK ಸೆ. 15: ಸುಂಟಿಕೊಪ್ಪದ ಶ್ರೀದೇವಿ ನಾರ್ಗಾಣೆ ಗ್ರಾಮ ಹಾಗೂ ಪಂಪ್‌ಹೌಸ್ ರಸ್ತೆಯ ಅಂಬೇಡ್ಕರ್ ನಗರದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಹಾಗೂ ಶ್ರೀ ವಿನಾಯಕ ಮಿತ್ರ ಮಂಡಳಿಯ ವತಿಯಿಂದ ಗೌರಿ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶ್ರೀದೇವಿ ನಾರ್ಗಾಣೆ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿಯ 13ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸೋಮವಾರ ಬೆಳಿಗ್ಗೆ ಗಿರಿಯಪ್ಪ ಅವರ ಮನೆಯ ಗೌರಮ್ಮ ಬಾವಿಯಿಂದ ಗಂಗಾಜಲವನ್ನು ನಾದಸ್ವರ ವಾದನಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಬೆಳಿಗ್ಗೆ 10.30ಕ್ಕೆ ಗಣಹೋಮದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡು, 11.30 ಗಂಟೆಗೆ ತುಲಾ ಲಗ್ನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಹಿರಿಯ ಕೆದಕಲ್ ಈಶ್ವರ ಮಹಾದೇವ ದೇವಾಲಯದ ಅರ್ಚಕರಾದ ಲೋಕೇಶ್ ಆರಾಧ್ಯ ಹಾಗೂ ಅವಿನಾಶ್ ಆರಾಧ್ಯ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮಹಾಮಂಗಳಾರತಿಯ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಿತು.
ಇದೇ ಸಂದರ್ಭದಲ್ಲಿ ಸುಂಟಿಕೊಪ್ಪ ಪಂಪ್‌ಹೌಸ್ ರಸ್ತೆಯ ಅಂಬೇಡ್ಕರ್ ನಗರದ ಶ್ರೀ ವಿನಾಯಕ ಮಿತ್ರ ಮಂಡಳಿ ಸಮಿತಿಯ ವತಿಯಿಂದ 2ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ 10.30ರಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, 11.30 ಗಂಟೆಗೆ ತುಲಾ ಲಗ್ನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಸೆ. 16ರಂದು ಅಪರಾಹ್ನ 1 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಉತ್ಸವ ಮೂರ್ತಿಗಳಾದ ಶ್ರೀ ಗೌರಿ ಗಣೇಶ ವಿಗ್ರಹಗಳನ್ನು ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಬಳಿಕ ಗರಂಗದೂರು ಹೊಳೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಗುವುದೆಂದು ಶ್ರೀ ವಿನಾಯಕ ಮಿತ್ರ ಮಂಡಳಿ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪುನಿತ್ ಕುಮಾರ್ ಸೇರಿದಂತೆ ಸುಜಿತ್, ಮನುಮೋಹನ, ಪ್ರಶಾಂತ್, ವಿನಿತ್, ಕಾರ್ತಿಕ್, ಸುಧಿ, ಮೋಹನ್, ಬಿ.ಕೆ. ರಾಜೇಶ್, ಬಿ.ಡಿ. ರಾಜುರೈ, ಶರತ್, ವಿವೇಕ್ ರೈ, ಕುಶಾಲಪ್ಪ, ಪಿ.ಆರ್. ಸುನಿಲ್ ಕುಮಾರ್, ಮಹೇಂದ್ರ, ಆಕಾಶ್, ರಾಜ, ರಕ್ಷಿತ್, ಶಿವಪ್ರಸಾದ್ ರೈ, ವಿನು, ರಾಸಥಿ, ಗೀತಾ, ರೇವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







