
ಮಡಿಕೇರಿ, ಸೆ.15 NEWS DESK : ಭಾರತವು ವಿಶ್ವದಲ್ಲೇ ಬೃಹತ್ ಲಿಖಿತ ಸಂವಿಧಾನವನ್ನು ಹೊಂದಿದ್ದು, ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತದ ಸಂವಿಧಾನವು ಮೂಲತಃ 395 ವಿಧಿಗಳನ್ನು ಒಳಗೊಂಡಿದ್ದು, ಪ್ರಸ್ತುತ 25 ಭಾಗಗಳು, 12 ಅನುಸೂಚಿಗಳು ಸೇರಿದಂತೆ ಬೃಹತ್ ಸಂವಿಧಾನವಾಗಿ ರೂಪುಗೊಂಡಿದೆ. ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಬಗ್ಗೆ ಅಧ್ಯಯನ ಮಾಡುವುದರ ಜೊತೆಗೆ ಮೂಲಭೂತ ಹಕ್ಕುಗಳನ್ನು ಅರಿತುಕೊಂಡು ಕರ್ತವ್ಯಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸರ್ಕಾರ ಯುವ ಸಂಸತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ವಿದ್ಯಾರ್ಥಿಗಳು ಯುವ ಸಂಸತ್ನಲ್ಲಿ ಸಕ್ರಿಯವಾಗಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕೊಡಗು ಜಿಲ್ಲೆಗೆ ಉತ್ತಮ ಹೆಸರು ತರಬೇಕು ಎಂದು ಅವರು ಸಲಹೆ ನೀಡಿದರು. ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಸಿ.ದಯಾನಂದ ಮಾತನಾಡಿ, ಪ್ರಜಾಪ್ರಭುತ್ವ ಕೇವಲ ಆಡಳಿತ ವ್ಯವಸ್ಥೆಯಲ್ಲ; ಅದೊಂದು ಜೀವನದ ಮೌಲ್ಯವಾಗಿದೆ ಎಂದರು. ಪ್ರಜಾಪ್ರಭುತ್ವವು ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಸಹಿಷ್ಣುತೆ, ಮಾನವ ಹಕ್ಕುಗಳು, ಹೊಣೆಗಾರಿಕೆ, ಪರಸ್ಪರ ನಂಬಿಕೆ ಹಾಗೂ ಗೌರವದಂತಹ ಮೂಲ ಅಂಶಗಳ ಮೇಲೆ ನಿಂತಿದೆ. ಜನರ ಧ್ವನಿಗೆ ಬೆಲೆ ಇರುವಲ್ಲಿ ಪ್ರಜಾಪ್ರಭುತ್ವವಿದೆ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಪ್ರತಿಯೊಬ್ಬ ವ್ಯಕ್ತಿಯ ಘನತೆಗೆ ಗೌರವ ದೊರೆಯುವಲ್ಲಿ ನಿಜವಾದ ಸ್ವಾತಂತ್ರ್ಯವಿದೆ ಎಂದು ಅವರು ಹೇಳಿದರು. ಮಹಾತ್ಮ ಗಾಂಧೀಜಿಯವರ ಪ್ರಕಾರ, ಪ್ರಜಾಪ್ರಭುತ್ವವು ದುರ್ಬಲರನ್ನು ಬಲಿಷ್ಠರಿಂದ ರಕ್ಷಿಸುವ ವ್ಯವಸ್ಥೆಯಾಗಿರಬೇಕು. ನಿಜವಾದ ಪ್ರಜಾಪ್ರಭುತ್ವ ಎಂದರೆ ಕೇವಲ ಬಹುಮತದ ಆಳ್ವಿಕೆಯಲ್ಲ; ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಗೌರವ ದೊರೆಯುವುದಾಗಿದೆ ಎಂದು ದಯಾನಂದ ವಿವರಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನರು ಆಡಳಿತದ ಮೂಲವಾಗಿದ್ದು, ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಜನಪ್ರತಿನಿಧಿಗಳು ಜನರ ಆಶಯದಂತೆ ಆಡಳಿತ ನಡೆಸಬೇಕು ಎಂದರು. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಯಲ್ಲ. ಚುನಾವಣೆಯು ಅದರ ಪ್ರಮುಖ ಭಾಗವಾಗಿದ್ದು, ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದೇ ಪ್ರಜಾಪ್ರಭುತ್ವದ ಪ್ರಮುಖ ಆಶಯವಾಗಿದೆ ಎಂದು ಹೇಳಿದರು. ಪ್ರಜಾಪ್ರಭುತ್ವದ ಯಶಸ್ಸು ಕೇವಲ ನಾಯಕರಿಂದ ಸಾಧ್ಯವಿಲ್ಲ. ಜವಾಬ್ದಾರಿಯುತ ನಾಗರಿಕರಿಂದ ಮಾತ್ರ ಅದು ಸಾಧ್ಯ. ಈ ನಿಟ್ಟಿನಲ್ಲಿ ಮತದಾನ ಅತ್ಯಂತ ಪ್ರಮುಖ ಹಕ್ಕು ಹಾಗೂ ಕರ್ತವ್ಯವಾಗಿದೆ. ಯಾವುದೇ ಆಮಿಷ, ಒತ್ತಡ ಅಥವಾ ವೈಯಕ್ತಿಕ ಲಾಭಕ್ಕೆ ಒಳಗಾಗದೆ ಮತಹಕ್ಕು ಚಲಾಯಿಸಬೇಕು. ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮತವನ್ನು ಮಾರಿಕೊಳ್ಳಬಾರದು ಎಂದು ಅವರು ಒತ್ತಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದ್ದು, ಭಿನ್ನಾಭಿಪ್ರಾಯಕ್ಕೂ ಅವಕಾಶವಿದೆ. ಪ್ರಜಾಪ್ರಭುತ್ವ ಉಳಿದರೆ ಸ್ವಾತಂತ್ರ್ಯ ಉಳಿಯುತ್ತದೆ; ಸ್ವಾತಂತ್ರ್ಯ ಉಳಿದರೆ ಸಮಾನತೆ ಉಳಿಯುತ್ತದೆ; ಸಮಾನತೆ ಉಳಿದರೆ ನ್ಯಾಯ ಉಳಿಯುತ್ತದೆ; ನ್ಯಾಯ ಉಳಿದರೆ ರಾಷ್ಟ್ರದ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಡಾ.ದಯಾನಂದ ಹೇಳಿದರು. ಪ್ರಜಾಪ್ರಭುತ್ವದ ಯಶಸ್ಸು ಕೇವಲ ಚುನಾವಣೆ ನಡೆಸುವುದರಿಂದ ಸಾಧ್ಯವಿಲ್ಲ. ಜಾಗೃತ ಪ್ರಜೆಗಳು, ಉತ್ತಮ ಆಡಳಿತ, ಕಾನೂನಿನ ಆಳ್ವಿಕೆ ಹಾಗೂ ಸಂವಿಧಾನದ ಮೌಲ್ಯಗಳ ಪಾಲನೆಯಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದರು. ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಪ್ರಜಾಪ್ರಭುತ್ವದ ತತ್ವಗಳು ಮತ್ತು ಮೌಲ್ಯಗಳನ್ನು ಸಂರಕ್ಷಿಸುವುದು ಹಾಗೂ ಜನರಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2007ರಲ್ಲಿ ಸೆಪ್ಟೆಂಬರ್ 15ನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹೇಶ್, ಎಚ್.ಎಲ್.ದಿವಾಕರ, ಗಾಯತ್ರಿ, ಎಚ್.ಎಲ್.ಕುಮಾರ, ಪ್ರೇಮ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಈ.ರಾಜು ಮತ್ತು ತಂಡದವರು ಸಂವಿಧಾನದ ಕುರಿತು ಹಾಡು ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಅವರು ಸಂವಿಧಾನದ ಪೀಠಿಕೆಯನ್ನು ಓದಿಸಿದರು. ಲಹರಿ ತಂಡದವರು ವಂದೇ ಮಾತರಂ, ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಪವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










