ಕುಶಾಲನಗರ, NEWS DESK ಸೆ.15: ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮದ ಕೋಟೆಯ ಎಸ್.ಆರ್. ಶಿವಪ್ರಸಾದ್ ಅವರ ಮನೆಯಲ್ಲಿ ಮಕ್ಕಳಾದ ಎಸ್. ಕೃತಿಕ ಪ್ರಸಾದ್ ಹಾಗೂ ಎಸ್. ಭರತೇಶ್ ಅವರು ಪರಿಸರ ಸ್ನೇಹಿ ಗಣೇಶೋತ್ಸವದ ಅಂಗವಾಗಿ ಮಣ್ಣಿನಿಂದ ಗಣೇಶ ಹಾಗೂ ಗೌರಿಯ ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸಿರುವುದು ಗಮನ ಸೆಳೆದಿದೆ.
ಮಕ್ಕಳ ಈ ಪರಿಸರ ಕಾಳಜಿಗೆ ಅವರ ತಂದೆ ಎಸ್.ಆರ್. ಶಿವಪ್ರಸಾದ್ ಹಾಗೂ ತಾಯಿ ಚಂಪಕ ಅವರ ಪ್ರೇರಣೆ ಮತ್ತು ಸಹಕಾರ ಕಾರಣವಾಗಿದೆ.
ಕೂಡಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಎಸ್. ಕೃತಿಕ ಪ್ರಸಾದ್, ಕಳೆದ ಐದು ವರ್ಷಗಳಿಂದ ತಮ್ಮ ಮನೆಯಲ್ಲಿ ರಾಸಾಯನಿಕ ಬಣ್ಣಗಳನ್ನು ಬಳಸದೆ ನೈಸರ್ಗಿಕವಾಗಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತಿದ್ದಾರೆ.
ಮಕ್ಕಳ ಈ ಪರಿಸರ ಸ್ನೇಹಿ ಪ್ರಯತ್ನವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಪರಿಸರ ಪ್ರೇಮಿ ಟಿ.ಜಿ. ಪ್ರೇಮಕುಮಾರ್ ಶ್ಲಾಘಿಸಿದ್ದು, ಇಂತಹ ಪ್ರಯತ್ನಗಳು ಇತರರಿಗೂ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








