ವಿರಾಜಪೇಟೆ, NEWS DESK ನ.3: ಕೊಡವ ಜಮ್ಮ ಮುಸ್ಲಿಂ ಕುಟುಂಬಗಳನ್ನು ಕ್ರೀಡೆಯ ಮೂಲಕ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗುತ್ತಿರುವ ಎರಡನೇ ಆವೃತ್ತಿಯ ವಾಲಿಬಾಲ್ ಹಾಗೂ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟಕ್ಕೆ ಸಿದ್ಧತೆಗಳು ಆರಂಭಗೊಂಡಿವೆ.
ಈ ಹಿನ್ನೆಲೆಯಲ್ಲಿ ಎರಡೂ ಕ್ರೀಡಾಕೂಟಗಳ ಆಯೋಜನೆಯ ಜವಾಬ್ದಾರಿ ವಹಿಸಿಕೊಂಡಿರುವ ಕುಟುಂಬಗಳಿಗೆ ಪಂದ್ಯಾಟದ ಧ್ವಜ ಹಸ್ತಾಂತರಿಸುವ ಕಾರ್ಯಕ್ರಮ ವಿರಾಜಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಕುವಲೆರ ಅನಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎರಡನೇ ಆವೃತ್ತಿಯ ವಾಲಿಬಾಲ್ ಪಂದ್ಯಾಟದ ಆಯೋಜನೆಯ ಜವಾಬ್ದಾರಿಯನ್ನು ಚಿಟ್ಟಡೆ ಎರ್ಟಂಡ ಕುಟುಂಬಸ್ಥರು ಹಾಗೂ ನಾಲ್ಕನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟದ ಆಯೋಜನೆಯ ಜವಾಬ್ದಾರಿಯನ್ನು ಕುಂಜಿಲ ವಯಕೋಲಂಡ ಕುಟುಂಬಸ್ಥರು ವಹಿಸಿಕೊಂಡರು. ಈ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಹಿರಿಯರಿಗೆ ಅಧಿಕೃತವಾಗಿ ಪಂದ್ಯಾಟದ ಧ್ವಜವನ್ನು ಹಸ್ತಾಂತರಿಸಲಾಯಿತು.
ಧ್ವಜ ಹಸ್ತಾಂತರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕುವಲೆರ ಅನಿಸ್ ಅವರು, ಕೊಡವ ಜಮ್ಮ ಮುಸ್ಲಿಂ ಕುಟುಂಬಗಳನ್ನು ಒಂದೆಡೆ ಸೇರಿಸಿ ಪರಸ್ಪರ ಬಾಂಧವ್ಯ, ಸೌಹಾರ್ದತೆ ಹಾಗೂ ಕ್ರೀಡಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಸಂಘದ ವತಿಯಿಂದ ಪ್ರತಿವರ್ಷ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ವಾಲಿಬಾಲ್ ಪಂದ್ಯಾಟದ ಎರಡನೇ ಆವೃತ್ತಿಯನ್ನು ಎರ್ಟಂಡ ಕುಟುಂಬಸ್ಥರು ಹಾಗೂ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ಆವೃತ್ತಿಯನ್ನು ವಯಕೋಲಂಡ ಕುಟುಂಬಸ್ಥರು ಆಯೋಜಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕ್ರೀಡೆ ಕೇವಲ ಸ್ಪರ್ಧೆಗೆ ಸೀಮಿತವಾಗದೆ ಕುಟುಂಬಗಳ ನಡುವೆ ಆತ್ಮೀಯತೆ ಮತ್ತು ಒಗ್ಗಟ್ಟನ್ನು ಬೆಸೆಯುವ ವೇದಿಕೆಯಾಗಬೇಕು. ಕೊಡಗಿನಲ್ಲಿರುವ ಎಲ್ಲಾ ಕೊಡವ ಜಮ್ಮ ಮುಸ್ಲಿಂ ಕುಟುಂಬಗಳು ಈ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಹಕಾರ ನೀಡುವ ಮೂಲಕ ಪಂದ್ಯಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಮಂದಮಡ ಮುನೀರ್ ಅಝೀಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪುಡಿಯಂಡ ಮುನೀರ್, ಕುವಲೆರ ಕಲಿಲ್, ಮಿಥಲ ತಂಡ ಲತೀಫ್, ಕುವಲೆರ ಶಂಶುದ್ದೀನ್, ಕುವಲೆರ ರಶೀದ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊಡವ ಜಮ್ಮ ಮುಸ್ಲಿಂ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

















