ವಿರಾಜಪೇಟೆ, NEWS DESK ನ.3: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ವಿರಾಜಪೇಟೆ ತಾಲೂಕು, ಗೋಣಿಕೊಪ್ಪ ವಲಯದ ವತಿಯಿಂದ ಕಳತ್ ಮಾಡು ಗ್ರಾಮದ ಡಾಲಿ ಅವರ ಕೃಷಿ ತಾಕುವಿನಲ್ಲಿ ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೃಷಿ ವಿಜ್ಞಾನ ಸಂಸ್ಥೆಯ ವಿಜ್ಞಾನಿ ವೀರೇಂದ್ರ ಕುಮಾರ್ ಮಾತನಾಡಿ, ಹಿಂದಿನ ಕಾಲದಲ್ಲಿ ರೈತರು ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಮಧ್ಯವರ್ತಿಗಳ ಮೇಲೆ ಅವಲಂಬಿತರಾಗಬೇಕಿತ್ತು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಮೂಲಕವೇ ವಿವಿಧ ಮಾರುಕಟ್ಟೆಗಳ ಬೆಲೆಗಳನ್ನು ತಿಳಿದುಕೊಂಡು, ಸೂಕ್ತ ಮಾರುಕಟ್ಟೆಯನ್ನು ಆಯ್ಕೆ ಮಾಡಿಕೊಂಡು ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ ಎಂದು ತಿಳಿಸಿದರು.
ಕೊಡಗಿನಲ್ಲಿ ಬೆಳೆಯುವ ಅರೇಬಿಕಾ ಮತ್ತು ರೋಬಸ್ಟಾ ಕಾಫಿ ತಳಿಗಳ ಕುರಿತು ಮಾಹಿತಿ ನೀಡಿದ ಅವರು, ಅರೇಬಿಕಾ ಕಾಫಿ ಉತ್ತಮ ಗುಣಮಟ್ಟ ಮತ್ತು ರುಚಿಯನ್ನು ಹೊಂದಿದ್ದು, ಎತ್ತರದ ಪ್ರದೇಶಗಳಲ್ಲಿ ನೆರಳಿನ ವಾತಾವರಣದಲ್ಲಿ ಬೆಳೆಯಲು ಸೂಕ್ತವಾಗಿದೆ. ಆದರೆ ರೋಗಬಾಧೆಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ರೋಬಸ್ಟಾ ಕಾಫಿ ಗಿಡಗಳು ಗಟ್ಟಿಯಾಗಿದ್ದು, ಉತ್ತಮ ಇಳುವರಿ ನೀಡುತ್ತವೆ. ಕಡಿಮೆ ಎತ್ತರದ ಪ್ರದೇಶಗಳಲ್ಲಿಯೂ ಬೆಳೆಯಬಹುದಾದ ಈ ತಳಿಯನ್ನು ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ ಎಂದು ವಿವರಿಸಿದರು.
ಚೆಟ್ಟಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರಮೇಶ್ ಬಾಬು ಅವರು ವಿವಿಧ ತಳಿಯ ಹಣ್ಣಿನ ಬೆಳೆಗಳು, ಅವುಗಳ ಕೃಷಿ ಪದ್ಧತಿ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡಿದರು. ವಿಜ್ಞಾನಿ ಮಧು ಅವರು ಕೃಷಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿಯನ್ನು ಹಂಚಿಕೊಂಡರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯ ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಾಗೂ ಮಾರುತಿ ಮಾತನಾಡಿ, ಯೋಜನೆಯ ವತಿಯಿಂದ ರೈತರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಕೃಷಿ ಕಾರ್ಯಕ್ರಮಗಳು, ಅಧ್ಯಯನ ಪ್ರವಾಸಗಳು ಹಾಗೂ ಯಂತ್ರಶ್ರೀ ಯೋಜನೆಯ ಮೂಲಕ ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣಕ್ಕೆ ನೀಡಲಾಗುತ್ತಿರುವ ಪ್ರೋತ್ಸಾಹದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಡಾಲಿ, ಮಾಜಿ ಸೈನಿಕ ಕಾಳಪ್ಪ, ಶೌರ್ಯ ತಂಡದ ಮಾಸ್ಟರ್ ತೀರ್ಥಕುಮಾರ್, ಕೃಷಿ ಮೇಲ್ವಿಚಾರಕ ವಸಂತ್, ಸೇವಾಪ್ರತಿನಿಧಿಗಳಾದ ಜಯಪ್ರಕಾಶ್, ಪದ್ಮ, ವಿಎಲ್ಇ ಆಶಾ, ಗ್ರಾಮದ ರೈತರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ರೈತರಿಗೆ ಆಧುನಿಕ ತಂತ್ರಜ್ಞಾನದ ಬಳಕೆ, ಕೃಷಿ ಉತ್ಪನ್ನಗಳ ಮಾರುಕಟ್ಟೆ ಮಾಹಿತಿ ಹಾಗೂ ಕೃಷಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗಗಳ ಕುರಿತು ಉಪಯುಕ್ತ ಅರಿವು ಮೂಡಿಸಿತು.

















