ಮಡಿಕೇರಿ, NEWS DESK ನ.4: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಅರೇಬಿಕಾ ಹಾಗೂ ಮಂಡ್ಯ ತಂಡಗಳು ಜಂಟಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡವು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯ ಅಂತಿಮ ಹಂತದಲ್ಲಿ ಸಂಜೆ ಸುರಿದ ಭಾರಿ ಮಳೆ ಹಾಗೂ ಕತ್ತಲಿನ ಕಾರಣದಿಂದ ಪ್ಲೇ ಆಫ್ ಪಂದ್ಯಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಫೈನಲ್ ಪ್ರವೇಶಿಸಿದ್ದ ಕೊಡಗು ಅರೇಬಿಕಾ ಹಾಗೂ ಮಂಡ್ಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.
ಆದರೆ ಚಾಂಪಿಯನ್ ಟ್ರೋಫಿ ವಿತರಣೆಗಾಗಿ ಬಾಲ್ ಔಟ್ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಯಿತು. ಎರಡೂ ತಂಡಗಳಿಗೆ ತಲಾ ಆರು ಎಸೆತಗಳನ್ನು ಎಸೆಯುವ ಅವಕಾಶ ನೀಡಲಾಗಿದ್ದು, ಎದುರಾಳಿ ತಂಡದ ವಿಕೆಟ್‌ಗಳನ್ನು ಉರುಳಿಸುವ ಆಧಾರದ ಮೇಲೆ ಟ್ರೋಫಿ ವಿಜೇತರನ್ನು ನಿರ್ಧರಿಸಲಾಯಿತು. ಈ ರೋಚಕ ಪ್ರಕ್ರಿಯೆಯಲ್ಲಿ 1-0 ಅಂತರದಿಂದ ಮಂಡ್ಯ ತಂಡ ಮೇಲುಗೈ ಸಾಧಿಸಿ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಮಳೆ ಹಾಗೂ ಕತ್ತಲಿನ ನಡುವೆಯೂ ಕಾರುಗಳ ಹೆಡ್‌ಲೈಟ್‌ಗಳನ್ನು ಬೆಳಕಿನ ವ್ಯವಸ್ಥೆಯಾಗಿ ಬಳಸಿಕೊಂಡು ಬಾಲ್ ಔಟ್ ಪ್ರಕ್ರಿಯೆ ನಡೆಸಿದ್ದು ಪಂದ್ಯಾವಳಿಯ ವಿಶೇಷ ಆಕರ್ಷಣೆಯಾಗಿತ್ತು. ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಸೇರಿದಂತೆ ಗಣ್ಯರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.
ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ನಿಗದಿಯಾಗಿದ್ದ ಒಟ್ಟು ರೂ.1.50 ಲಕ್ಷ ನಗದು ಬಹುಮಾನವನ್ನು ಎರಡೂ ತಂಡಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಯಿತು. ಬಾಗಲಕೋಟೆ ತಂಡ ತೃತೀಯ ಹಾಗೂ ಚಿಕ್ಕಬಳ್ಳಾಪುರ ತಂಡ ಚತುರ್ಥ ಬಹುಮಾನ ಪಡೆದುಕೊಂಡವು. ಕೊಡಗಿನ ಎರಡು ತಂಡಗಳು ಸೇರಿದಂತೆ ಒಟ್ಟು 24 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ಪತ್ರಕರ್ತರು ಸಂಘಟಿತರಾದರೆ ಸಮಾಜ ಸದೃಢ:
ಪತ್ರಕರ್ತರು ಸಂಘಟಿತರಾದರೆ ಸಮಾಜ ಸದೃಢವಾಗಿರುತ್ತದೆ. ರಾಜಕಾರಣಿಗಳು ಸರಿದಾರಿಯಲ್ಲಿ ಸಾಗಲು ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಕ್ರೀಡೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಾಗಿದೆ ಎಂದು ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು, ದಿನನಿತ್ಯದ ಒತ್ತಡದ ನಡುವೆಯೂ ಪತ್ರಕರ್ತರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಗಮನಾರ್ಹ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆಲುವೊಂದೇ ಮುಖ್ಯವಲ್ಲ, ಸೋಲು ಕೂಡ ಗೆಲುವಿನ ಮೆಟ್ಟಿಲಾಗುತ್ತದೆ. ಇಂತಹ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕ್ರೀಡೆಯಿಂದ ಪರಸ್ಪರ ಸ್ನೇಹ ಹಾಗೂ ಸೌಹಾರ್ದತೆ ಬೆಳೆಯುತ್ತದೆ. ಪತ್ರಕರ್ತರು ಕ್ರೀಡೆಯ ಮೂಲಕ ತಮ್ಮ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗು ಜಿಲ್ಲೆ ಪಂದ್ಯಾವಳಿಯನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುವ ಮೂಲಕ ತನ್ನ ಸಂಘಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 13 ವರ್ಷಗಳ ಹಿಂದೆ ಕೂಡ ಕೊಡಗಿನಲ್ಲಿ ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಹವಾಮಾನ ವೈಪರೀತ್ಯದಿಂದ ಕೆಲವು ಸಮಸ್ಯೆಗಳು ಎದುರಾದರೂ ಪಂದ್ಯಾವಳಿಯನ್ನು ಸಮರ್ಥವಾಗಿ ನಡೆಸಲಾಗಿದೆ. ಕ್ರೀಡಾಸ್ಫೂರ್ತಿಯನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.
ರಿಪಬ್ಲಿಕ್ ನೆಟ್‌ವರ್ಕ್ ಅಧ್ಯಕ್ಷ ಚೇರಂಡ ಕಿಶನ್ ಮಾದಪ್ಪ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮನೋಲ್ಲಾಸದೊಂದಿಗೆ ಹೊಸ ಚೈತನ್ಯ ದೊರೆಯುತ್ತದೆ ಎಂದರು.
ಹಿಂದಿನ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಇಷ್ಟೊಂದು ಸಂಖ್ಯೆಯ ಪತ್ರಕರ್ತರನ್ನು ಒಗ್ಗೂಡಿಸಿ ಕಾರ್ಯಕ್ರಮ ನಿರ್ವಹಿಸುವುದು ಸುಲಭದ ಕೆಲಸವಲ್ಲ. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಚ್ಚುಕಟ್ಟಾಗಿ ಪಂದ್ಯಾವಳಿ ಆಯೋಜಿಸಿದೆ. ಪತ್ರಕರ್ತರು ಸಂಘಟಿತರಾಗಿ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿರುವುದು ಸಂತಸದ ವಿಚಾರ ಎಂದರು.
ಉದ್ಯಮಿ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ಕಾವೇರಿಯನ್ನು ಪೂಜನೀಯ ಭಾವನೆಯಿಂದ ಕಾಣುವ ಕೊಡಗು ಮತ್ತು ಮಂಡ್ಯ ಜಿಲ್ಲೆಗಳ ತಂಡಗಳು ಜಂಟಿ ಚಾಂಪಿಯನ್ ಆಗಿರುವುದು ವಿಶೇಷ ಎಂದರು.
ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಕ್ರೀಡೆಯ ಮೂಲಕ ಒಂದಾಗಿರುವುದು ಸಂತಸದ ವಿಚಾರ. ಕೊಡಗಿನ ಕಾಫಿ ತಳಿಗಳಾದ ಅರೇಬಿಕಾ ಹಾಗೂ ರೊಬಸ್ಟಾ ಹೆಸರಿನಲ್ಲಿ ತಂಡಗಳಿಗೆ ನಾಮಕರಣ ಮಾಡಿರುವುದು ವಿಶೇಷ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಶಶಿಧರ್, ಹಿರಿಯ ಪತ್ರಕರ್ತ ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ರಾಜ್ಯ ಸಮಿತಿ ಸದಸ್ಯೆ ಬಿ.ಆರ್. ಸವಿತಾ ರೈ, ರಾಷ್ಟ್ರೀಯ ಸಮಿತಿ ಸದಸ್ಯ ಪಾರ್ಥ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ವಿಜೇತರು:
-
ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್: ದಿಲೀಪ್ (ಮಂಡ್ಯ)
-
ಬೆಸ್ಟ್ ಬ್ಯಾಟ್ಸ್‌ಮನ್: ಅಭಿಜಿತ್ (ಹಾಸನ)
-
ಬೆಸ್ಟ್ ಬೌಲರ್: ಪರಶುರಾಮ್ ಸನಗಿ (ಬಾಗಲಕೋಟೆ)
-
ಬೆಸ್ಟ್ ಕ್ಯಾಚ್: ಅಖಿಲೇಶ್ (ಕೊಡಗು ಅರೇಬಿಕಾ)
-
ಬೆಸ್ಟ್ ಕೀಪರ್: ನಂದನ್ ರಾಮಕೃಷ್ಣ (ಮಂಡ್ಯ)
-
ಬೆಸ್ಟ್ ಫೀಲ್ಡರ್: ಇಸ್ಮಾಯಿಲ್ ಕಂಡಕರೆ (ಕೊಡಗು ಅರೇಬಿಕಾ)
-
ಉತ್ತಮ ತಂಡ: ಚಿಕ್ಕಮಗಳೂರು
-
ಮ್ಯಾನ್ ಆಫ್ ದಿ ಸೀರಿಸ್: ಮುತ್ತು (ಬಾಗಲಕೋಟೆ)

















