ಮಡಿಕೇರಿ, NEWS DESK ನ.4: ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಡಿಕೇರಿ ದಸರಾವನ್ನು ವರ್ಷದಿಂದ ವರ್ಷಕ್ಕೆ ಮತ್ತಷ್ಟು ವಿಜೃಂಭಣೆಯಿಂದ ಜನೋತ್ಸವವಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಕರೆದು ದಸರಾ ಬೈಲಾ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು.
ನಗರದ ರೆಡ್ಬ್ರಿಕ್ಸ್ ಸಂಸ್ಥೆಯ ಸತ್ಕಾರ ಸಭಾಂಗಣದಲ್ಲಿ ದಸರಾ ದಶಮಂಟಪ ಸಮಿತಿ ಹಾಗೂ 62 ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದಸರಾ ಸಿದ್ಧತೆಗಳನ್ನು ಏಪ್ರಿಲ್ ತಿಂಗಳಿನಿಂದಲೇ ಆರಂಭಿಸಬೇಕು. ಮಂಟಪಗಳ ನಿರ್ಮಾಣದಲ್ಲಿ ಹಲವರು ಶ್ರಮಿಸುತ್ತಾರೆ. ಮಡಿಕೇರಿ ದಸರಾದಲ್ಲಿ ಕರಗ ಉತ್ಸವದ ಜೊತೆಗೆ ಶೋಭಾಯಾತ್ರೆಗೂ ವಿಶೇಷ ಮಹತ್ವವಿದೆ. ಈ ನಿಟ್ಟಿನಲ್ಲಿ ದಶಮಂಟಪ ಸಮಿತಿಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ದಸರಾವನ್ನು ಜನೋತ್ಸವವನ್ನಾಗಿ ಆಚರಿಸುವುದು ಶಾಸಕನಾಗಿ ತಮ್ಮ ಜವಾಬ್ದಾರಿಯಾಗಿದೆ. ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ, ಕಾಫಿ ದಸರಾ, ಜಾನಪದ ದಸರಾ ಹಾಗೂ ಕ್ರೀಡಾ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮಡಿಕೇರಿ ದಸರಾದ ಆಕರ್ಷಣೆಯಾಗಿವೆ. ಮುಂದಿನ ದಿನಗಳಲ್ಲಿ ಇವುಗಳನ್ನು ಇನ್ನಷ್ಟು ಸುಧಾರಿಸಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಗರದ ಗಾಂಧಿ ಮೈದಾನದಲ್ಲಿ ಹೈಟೆಕ್ ವೇದಿಕೆ ನಿರ್ಮಾಣವಾಗುತ್ತಿದ್ದು, ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಮಾರ್ಗವನ್ನು ಭೂಗತವಾಗಿ ಅಳವಡಿಸುವ ಯೋಜನೆಯೂ ಇದೆ. ನಗರದ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮಡಿಕೇರಿ ದಸರೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ದಸರಾ ಬೈಲಾ ರಚನೆಯಾಗಿ ಹಲವು ದಶಕಗಳು ಕಳೆದಿರುವುದರಿಂದ ಶಾಸಕರ ನೇತೃತ್ವದಲ್ಲಿ ನೂತನ ಬೈಲಾ ರಚನೆಯಾಗಬೇಕು. ಅಲ್ಲದೆ, ದಸರಾಗೆ ಸರ್ಕಾರದ ಮುಂಗಡ ಪತ್ರದಲ್ಲಿಯೇ ಅನುದಾನ ನಿಗದಿಪಡಿಸುವ ಪ್ರಯತ್ನ ನಡೆಯಬೇಕು ಎಂದು ಸಲಹೆ ನೀಡಿದರು.
ಶಾಸಕ ಡಾ.ಮಂತರ್ ಗೌಡ ಅವರು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಪ್ರಿಯತೆ ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಬಿ.ಗಣೇಶ್ ಮಾತನಾಡಿ, ಮಡಿಕೇರಿ ದಸರೆಗೆ ಈ ಹಿಂದೆ ವಿವಿಧ ಸಚಿವರ ಅವಧಿಯಲ್ಲಿ ಸರ್ಕಾರದಿಂದ ಅನುದಾನ ಒದಗಿಸಿದ ಸಂದರ್ಭಗಳನ್ನು ಸ್ಮರಿಸಿದರು. ಕಳೆದ ಬಾರಿ ಶಾಸಕರು 1.50 ಕೋಟಿ ರೂ. ಬಿಡುಗಡೆ ಮಾಡಿಸಿದ್ದು, ಈ ಬಾರಿ 2 ಕೋಟಿ ರೂ. ಅನುದಾನ ಕೊಡಿಸಿದ್ದಾರೆ ಎಂದು ಪ್ರಶಂಸಿಸಿದರು.
ಆದರೆ, ಈ ಬಾರಿ ದೊರೆತ 2 ಕೋಟಿ ರೂ. ಅನುದಾನಕ್ಕೆ ತಕ್ಕಂತೆ ದಸರಾ ಆಚರಣೆ ನಡೆದಿಲ್ಲ. ದಸರಾ ಆಯೋಜನೆಯಲ್ಲಿ ಶ್ರಮಿಸಿದವರಿಗೆ ನಿರೀಕ್ಷಿತ ಪ್ರತಿಫಲ ದೊರೆತಿಲ್ಲ ಎಂದು ಅಭಿಪ್ರಾಯಪಟ್ಟರು.
ದಶಮಂಟಪ ಸಮಿತಿಯ ಮಾಜಿ ಅಧ್ಯಕ್ಷ ಬಿ.ಎಂ.ರಾಜೇಶ್ ಮಾತನಾಡಿ, ಸಮಿತಿಯಲ್ಲಿರುವ ಹಲವು ನಿಯಮಗಳನ್ನು ಬದಲಾಯಿಸಿಕೊಂಡು ಮುನ್ನಡೆಯಬೇಕಿದೆ ಎಂದರು.
ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಶಾಸಕ ಡಾ.ಮಂತರ್ ಗೌಡ ಅವರು ದಸರಾ ಉತ್ಸವದ ಯಶಸ್ಸಿಗೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಶ್ರಮಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಕಾರ್ಯಪ್ಪ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಅರ್ಚಕ ಚಾಮಿ, ಪೌರ ಕಾರ್ಮಿಕರಾದ ಲಕ್ಷ್ಮಿ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಂತೋಷ್ ಅನ್ವೇಕರ್ ಹಾಗೂ ದಸರಾ ಸಮಿತಿ ಉಪಾಧ್ಯಕ್ಷ ವಿ.ಜೆ.ಮೋಹನ್ ಉಪಸ್ಥಿತರಿದ್ದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಚಾಲಕ ರಾಜೇಶ್ ಯಲ್ಲಪ್ಪ ಸ್ವಾಗತಿಸಿದರು. ಮುನೀರ್ ಅಹಮ್ಮದ್ ನಿರೂಪಿಸಿ, ವಂದಿಸಿದರು.

















