ಮಡಿಕೇರಿ ಅ.26 : ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಪೊನ್ನಣ್ಣ ಅವರಿಗೆ ವಿಧಾನಸೌಧದಲ್ಲಿ ಇಂದು ಮನವಿ ಸಲ್ಲಿಸಿದರು.
ಕಾಫಿ ಬೆಳೆಗಾರರಿಗೆ ಒತ್ತುವರಿ ಕಂದಾಯ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು ಮತ್ತು ಕಾಫಿ ಬೆಳೆಯನ್ನು ಬರಗಾಲ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ಅನೇಕ ಬೇಡಿಕೆಗಳ ಬಗ್ಗೆ ಪ್ರಮುಖರು ವಿವರಿಸಿದರು.
ಈ ಕುರಿತು ಪೊನ್ನಣ್ಣ ಅವರು ಮಾತನಾಡಿ ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ನ್ಯಾಯಾಲಯಗಳಲ್ಲಿ ಈ ಬಗ್ಗೆ ಅನೇಕ ತೀರ್ಪುಗಳಾಗಿದ್ದು, ಕಾನೂನಾತ್ಮಕ ಅಂಶಗಳನ್ನು ಒಳಗೊಂಡಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾನೂನಿನಡಿಯಲ್ಲಿ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಶ್ರಮಿಸುವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷರಾದ ಡಾ.ಹೆಚ್.ಟಿ. ಮೋಹನ್‍ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಬಿ.ಕೃಷ್ಣಪ್ಪ, ಕೊಡಗು – ಚಿಕ್ಕಮಂಗಳೂರು ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.









