

ಮೈಸೂರು NEWS DESK ಸೆ.18 : ಮೈಸೂರಿನಲ್ಲಿ ನೂತನವಾಗಿ ಆರಂಭಗೊಂಡ ಬೇಕಲ್ ಆಯುರ್ವೇದ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಭಾಗವಹಿಸಿ ನೂತನ ಕೇಂದ್ರಕ್ಕೆ ಶುಭ ಹಾರೈಸಿದರು. ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಈ ಆರೋಗ್ಯ ಕೇಂದ್ರವು ಆರಂಭಗೊಂಡಿದ್ದು, ಕೆಪಿಸಿಸಿ ಸದಸ್ಯರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬೇಕಲ್ ರಮನಾಥ್ ಅವರ ಪುತ್ರ ಡಾ. ಅಮರನಾಥ್ ಬೇಕಲ್ ಹಾಗೂ ಅವರ ಪತ್ನಿ ಡಾ. ಮೆರ್ಲಿನ್ ಅವರ ಒಡೆತನದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಕೇಂದ್ರದಲ್ಲಿ ಸಂಪೂರ್ಣ ಆಯುರ್ವೇದ ಚಿಕಿತ್ಸಾ ಪದ್ಧತಿಯೊಂದಿಗೆ ಪಂಚಕರ್ಮ ಚಿಕಿತ್ಸೆಗಳು ಹಾಗೂ ವಿಶೇಷ ಬಾಣಂತಿ ಆರೈಕೆ ಸೇವೆಗಳು ಲಭ್ಯವಿರಲಿವೆ ಎಂದು ಕೇಂದ್ರದ ಮಾಲೀಕರು ಈ ಸಂದರ್ಭ ತಿಳಿಸಿದರು. ನೂತನ ಆರೋಗ್ಯ ಕೇಂದ್ರದ ಉದ್ಘಾಟನೆಗೆ ಶುಭ ಕೋರಿದ ಶಾಸಕರು, ಈ ಕೇಂದ್ರವು ಯಶಸ್ವಿಯಾಗಿ ಮುನ್ನಡೆಯಲಿ ಹಾಗೂ ಸ್ಥಳೀಯ ಜನರಿಗೆ ಗುಣಮಟ್ಟದ ಆಯುರ್ವೇದ ಚಿಕಿತ್ಸಾ ಸೇವೆಗಳು ಮತ್ತಷ್ಟು ಸುಲಭವಾಗಿ ದೊರೆಯುವಂತಾಗಲಿ ಎಂದು ಹಾರೈಸಿದರು. ಪಾರಂಪರಿಕ ಆಯುರ್ವೇದ ಜ್ಞಾನವನ್ನು ಆಧುನಿಕ ಆರೋಗ್ಯ ಸೇವೆಯೊಂದಿಗೆ ಸಂಯೋಜಿಸಿ ಜನರಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಬೇಕಲ್ ಆಯುರ್ವೇದ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರ ಆರಂಭಗೊಂಡಿದೆ.









