ಸೋಮವಾರಪೇಟೆ, NEWS DESK ಸೆ.17: ಬಿಜೆಪಿ ಜಿಲ್ಲಾ ಯುವಮೋರ್ಚಾ ವತಿಯಿಂದ ರಕ್ತನಿಧಿ ಕೇಂದ್ರ ಮಡಿಕೇರಿ ಹಾಗೂ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಗುರುವಾರ ಕೊಡವ ಸಮಾಜದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಯುವಮೋರ್ಚಾದ ಕೊಡಗು ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ವತಿಯಿಂದ ಸೆ.17ರಿಂದ ಅ.17ರವರೆಗೆ ಸೇವಾ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಕ್ತದಾನ ಪವಿತ್ರವಾದ ಸೇವೆಯಾಗಿದ್ದು, ಒಂದು ಯೂನಿಟ್ ರಕ್ತದಾನದಿಂದ ಅಗತ್ಯವಿರುವ ಹಲವು ಮಂದಿಯ ಜೀವ ಉಳಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಹುಟ್ಟುಹಬ್ಬವನ್ನು ಸೇವಾ ಚಟುವಟಿಕೆಗಳ ಮೂಲಕ ಆಚರಿಸಲು ಪಕ್ಷ ನಿರ್ಧರಿಸಿದೆ ಎಂದರು.
ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ವಿವಿಧ ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಗುರುವಾರ ಬೆಳಿಗ್ಗೆ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು ಎಂದು ಹೇಳಿದರು.
ಅಭಿಯಾನದ ಅಂಗವಾಗಿ ಗುರುವಾರ ಸಂಜೆ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ದೀಪ ಬೆಳಗಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯುಷ್ಯ, ಆರೋಗ್ಯ ಹಾಗೂ ಉತ್ತಮ ಸೇವೆ ಸಲ್ಲಿಸಲು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಿದ್ದಾರೆ ಎಂದರು.
ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇವಾ ಮನೋಭಾವದಿಂದ ಅಭಿಯಾನದಲ್ಲಿ ಪಾಲ್ಗೊಂಡು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ 76 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಕಾರ್ಯದರ್ಶಿ ಇಂದಿರಾ ಮೊನ್ನಪ್ಪ, ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ರಕ್ಷಿತ್ ಮಾವೋಜಿ, ಪದಾಧಿಕಾರಿಗಳಾದ ಪ್ರವೀಣ್ ಮಲ್ಲಜ್ಜಿರ, ಮೋಹಿತ್, ಪ್ರಸಿದ್, ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಕರುಂಬಯ್ಯ, ಸಮುದಾಯ ಆರೋಗ್ಯಾಧಿಕಾರಿ ಧರಣೇಶ್ ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.







