ಕುಶಾಲನಗರ ಜ.3 : ರಾಜ್ಯದಲ್ಲಿ ಒಕ್ಕಲಿಗರಿಗೆ ಸೂಕ್ತ ಸ್ಥಾನಮಾನ ಸಿಗಲು ಆದಿ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರೇ ಕಾರಣ ಎಂದು ಆದಿಚುಂಚನಗಿರಿ ಮಠದ ಹಾಸನ ಮತ್ತು ಕೊಡಗು ಜಿಲ್ಲೆಯ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಮತ್ತು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡ, ರಾಷ್ಟ್ರ ಕವಿ ಕುವೆಂಪು ಹಾಗೂ ಸಮುದಾಯದ ಮಾರ್ಗದರ್ಶಕರಾದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಒಕ್ಕಲಿಗ ಜನಾಂಗದ ಹೆಮ್ಮೆಯ ವ್ಯಕ್ತಿಗಳಾಗಿದ್ದು, ಈ ಮೂವರಿಗೂ ಒಕ್ಕಲಿಗರ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದಂತೆ ದೂರದೃಷ್ಟಿ ಇತ್ತು. ಕೆಂಪೇಗೌಡ ಬೆಂಗಳೂರನ್ನು ಕಟ್ಟಿದರೆ, ಕುವೆಂಪು ವಿಶ್ವಮಾನವ ಸಂದೇಶ ಸಾರಿದರು. ಸಮುದಾಯದ ಏಳಿಗೆಗೆ ವೇದಿಕೆಯ ಅಗತ್ಯತೆಯೊಂದಿಗೆ ಸಂಘಟನಾ ಶಕ್ತಿ ಮೂಲಕ ಮಾತ್ರ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯ. ಒಕ್ಕಲಿಗರು ಉನ್ನತ ಸ್ಥಿತಿಗೆ ತಲುಪಬೇಕು ಎನ್ನುವುದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಕನಸಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ಮತ್ತು ಸಂಘಟನೆಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದ್ದರು ಎಂದು ಶ್ರೀಗಳು ನೆನಪಿಸಿದರು.
ಜನಾಂಗದ ಏಳಿಗೆಗಾಗಿ ಆದಿಚುಂಚನಗಿರಿ ಮಠ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ. ಸಮಾಜವನ್ನು ಒಡೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸಮುದಾಯ ಒಗ್ಗಟ್ಟಾಗಬೇಕು. ಇನ್ನೊಬ್ಬರಿಗೆ ತೊಂದರೆ ಆಗದ ರೀತಿಯಲ್ಲಿ ಸಂಘಟನೆ ಬೆಳೆಸಬೇಕು ಎಂದು ಕಿವಿಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪ್ಪಳ್ಳಿ ರವೀಂದ್ರ ಮಾತನಾಡಿ, ಪ್ರತಿಯೊಬ್ಬರೂ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕಾಗುತ್ತದೆ. ಒಕ್ಕಲಿಗರ ಸಂಘದ ಮೂಲಕ ಕೊಡಗು ಜಿಲ್ಲೆಯಲ್ಲಿ 2 ಕೋಟಿ ವೆಚ್ಚದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಲಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳಿಗೆ ತುರ್ತುಚಿಕಿತ್ಸೆ ನೀಡುವ ಆಸ್ಪತ್ರೆ ಸ್ಥಾಪನೆಗೂ ಸಂಘದ ಅನುಮೋದನೆ ದೊರಕಿದೆ ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಕುವೆಂಪು ಅವರು ಹೇಳಿದಂತೆ ಮಾನವ ಮಾನವೀಯತೆಯೊಂದಿಗೆ ಬಾಳಬೇಕು.ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯುವಂತಾಗಬೇಕು ಎಂದರು.
ಯುವ ಮುಖಂಡ ಡಾ.ಮಂತರ್ ಗೌಡ ಮಾತನಾಡಿ, ಸಂಘಟನೆಯಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ರಾಜಕೀಯ ಇರಬಾರದು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ವೇದಿಕೆ ವತಿಯಿಂದ ಮುಂದೆ ಜಿಲ್ಲೆಯಲ್ಲಿ ಆರೋಗ್ಯ ಮೇಳ ನಡೆಸುವ ಚಿಂತನೆ ಇದೆ.ಕ್ರೀಡೆ ಮತ್ತು ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹ ನೀಡಲಾಗುವುದು ಎಂದರು.
ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಸದಸ್ಯ ಬಿ.ಬಿ.ಭಾರತೀಶ್, ವಿ.ಪಿ. ಶಶಿಧರ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಸಂಘದ ಕುಶಾಲನಗರ ತಾಲೂಕು ಅಧ್ಯಕ್ಷ ಎಂ.ಕೆ.ದಿನೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ವಿ.ಟಿ.ಮೋಹನ್, ಕೊಡಗು ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಸ್.ಬಿ. ಭರತ್‍ಕುಮಾರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸುರೇಶ್, ಚೌಡ್ಲು ವಿ.ಎಸ್.ಎಸ್.ಎನ್. ಅಧ್ಯಕ್ಷ ಕೆ.ಟಿ. ಪರಮೇಶ್ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೂತಿ ಸುರೇಶ್, ಕುಶಾಲನಗರ ತಾಲೂಕಿನ ವಿ.ವಿ.ಜೈರಾಜ್, ಸೋಮವಾರಪೇಟೆ ತಾಲೂಕಿನ ಎಸ್.ಎಂ.ದಿಲೀಪ್, ವಿರಾಜಪೇಟೆ ತಾಲೂಕಿನ ವಿ.ಪಿ. ಲೋಹಿತ್‍ಗೌಡ, ಜಯದೇವ ಆಸ್ಪತ್ರೆ ವೈದ್ಯ ಡಾ.ಹರ್ಷ, ಸಹಕಾರಿ ಅರೆಯೂರು ಜಯಣ್ಣ, ಇತಿಹಾಸಕಾರ ಪುತ್ತೂರು ಅನಂತ ರಾಜೇಗೌಡ, ಗೌಡ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ವೇದಿಕೆಯಲ್ಲಿ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಲಿಂಗೈಕ್ಯರಾದ ಜ್ಞಾನ ಯೋಗಾಶ್ರಮದ ಸಂತ ಸಿದ್ದೇಶ್ವರ ಸ್ವಾಮೀಜಿಗಳಿಗೆ ಸಂತಾಪ ಸೂಚಿಸಲಾಯಿತು.