ಮಡಿಕೇರಿ ಜ.4 : ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸುವ ಮೂಲಭೂತ ಅಂಶವಾಗಿರುವ ಹಿನ್ನೆಲೆಯಲ್ಲಿ, ತನ್ನ ಅಧಿಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಥಮ ದರ್ಜೆ ಕಾಲೇಜುಗಳ ಆರಂಭ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು ಸೇರಿದಂತೆ ಚಿಕ್ಕ ಅಳುವಾರದಲ್ಲಿ ಕೊಡಗು ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಪ್ರಾಮಾಣಿಕವಾಗಿ ಶ್ರಮಿಸಿರುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.
ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಸಂಯುಕ್ತಾಶ್ರದಯಲ್ಲಿ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ‘ಸಂವಾದ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಮಡಿಕೇರಿ, ಗೋಣಿಕೊಪ್ಪಲು ಮತ್ತು ಸೋಮವಾರಪೇಟೆಗಳಲ್ಲಿ ಮಾತ್ರ ಪದವಿ ಕಾಲೇಜುಗಳಿದ್ದವಾದರೆ, ತಾನು ಅಧಿಕಾರದಲ್ಲಿ ಇದ್ದ ಸಂದರ್ಭ, ಡಿ.ಹೆಚ್. ಶಂಕರಮೂರ್ತಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ 162 ಪ್ರಥಮ ದರ್ಜೆ ಕಾಲೇಜುಗಳನ್ನು ರಾಜ್ಯದ ವಿವಿಧೆಡೆ ಆರಂಭಿಸಲಾಯಿತು. ಅದರ ಫಲ ಸ್ವರೂಪವಾಗಿ ನಾಪೋಕ್ಲು, ವಿರಾಜಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿ ಗಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲತೆ ದೊರಕಿತೆಂದು ಸಂತಸ ವ್ಯಕ್ತಪಡಿಸಿದರು.
ಭಾರತದ ಮೊದಲ ಮಹಾದಂಡನಾಯಕರಾದ ಫೀ.ಮಾ.ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ನಾಡಾದ ಕೊಡಗು ಯೋಧರ ನಾಡೆ ಆಗಿದೆ. ಇಂತಹ ಜಿಲ್ಲೆಯಲ್ಲಿ ‘ಸೈನಿಕ ಶಾಲೆ’ಯ ಆರಂಭವಾಗಬೇಕೆನ್ನುವ ಚಿಂತನೆಗಳಡಿ ತಾನು ನಡೆಸಿದ ಪ್ರಯತ್ನಗಳಿಂದ, ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀ0ಸ್ ಅವರು ಜಿಲ್ಲೆಗೆ ಸೈನಿಕ ಶಾಲೆಯನ್ನು ಮಂಜೂರು ಮಾಡಿದರು. ಇದರ ನಿರ್ಮಾಣಕ್ಕೆ ಅಂದಿನ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರು 5 ಕೊಟಿ ರೂ.ಗಳನ್ನು ಒದಗಿಸಿದ್ದರು. ಬಳಿಕ 45 ಕೋಟಿ ರೂ. ವೆಚ್ಚದಲ್ಲಿ ಸೈನಿಕ ಶಾಲೆ ತಲೆ ಎತ್ತಿದ್ದನ್ನು ಸ್ಮರಿಸಿ, ಡಿ.ಹೆಚ್.ಶಂಕರಮೂರ್ತಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಅವರಿಗೆ ಮನವಿ ಮಾಡಿಕೊಂಡ ಮೇರೆ, ಕುಶಾಲನಗರದಲ್ಲಿ ಪಾಲಿಟೆಕ್ನಿಕ್ ಕಾಲೇಜನ್ನು ಉಳಿಸಿಕೊಂಡು, ನೂತನ ಇಂಜಿನಿಯರ್ ಕಾಲೇಜು ಆರಂಭವಾಗಲು ಸಾಧ್ಯವಾಯಿತೆಂದು ಹೇಳಿದರು.
ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮತಿ ದೊರಕಿ, 234 ಕೋಟಿ ವೆಚ್ಚದಲ್ಲಿ ಕಾಲೇಜು ಅಸ್ತಿತ್ವಕ್ಕೆ ಬಂದಿತಾದರೆ, ಇತ್ತೀಚೆಗೆ ಚಿಕ್ಕಳುವಾರದ ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರವನ್ನು ಕೊಡಗು ವಿಶ್ವ ವಿದ್ಯಾನಿಲಯವನ್ನಾಗಿ ಮಾಡಲಾಗಿದೆ. ಈ ಎಲ್ಲಾ ಶಿಕ್ಷಣಕ್ಕೆ ಪೂರಕವಾದ ಕಾರ್ಯಗಳಿಂದ ಜಿಲ್ಲೆಯ ಯುವ ಸಮೂಹ ಉನ್ನತ ಶಿಕ್ಷಣಕ್ಕಾಗಿ ಹೊರ ಜಿಲ್ಲೆಗಳ ಬದಲಾಗಿ, ಜಿಲ್ಲೆಯಲ್ಲೆ ಅದನ್ನು ಪಡೆಯಲು ಸಾಧ್ಯವಾಗಿದೆ ಮತ್ತು ಮಕ್ಕಳಲ್ಲಿ ಉನ್ನತ ಶಿಕ್ಷಣ ಪಡೆಯುವ ಹೊಸ ಬೆಳಕನ್ನು ಕಾಣುವಂತಾಗಿದೆಯೆಂದು ಹರ್ಷ ವ್ಯಕಪಡಿಸಿದರು.
5 ಮೊರಾರ್ಜಿ ಶಾಲೆಗಳು : ಇವುಗಳ ಜೊತೆಯಲ್ಲೆ ಜಿಲ್ಲೆಯಲ್ಲಿ 5 ಮೊರಾರ್ಜಿ ವಸತಿ ಶಾಲೆಗಳ ಆರಂಭಿಸಲಾಗಿದ್ದು, ಪ್ರತಿ ವಸತಿ ಶಾಲೆಯ ಆರಂಭಕ್ಕೆ 15 ರಿಂದ 25 ಕೊಟಿ ರೂ.ಗಳನ್ನು ವ್ಯಯಿಸಲಾಗಿದೆ. ತಮ್ಮ ಅಧಿಕಾರದ ಅವಧಿಯುದ್ದಕ್ಕೂ ಶಿಕ್ಷಣಕ್ಕೆ ಒತ್ತು ನೀಡುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಲೆ ಬಂದಿರುವುದಾಗಿ ಹೇಳಿದರು.
ಸರ್ವ ಋತ ರಸ್ತೆಗಳಿಗೆ ಒತ್ತು : ಜಿಲ್ಲೆಯ ಗಾಮೀಣ ಭಾಗಗಳಲ್ಲಿ ಸರ್ವಋತು ರಸ್ತೆಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿಯ 400 ಕಿ.ಮೀ. ರಸ್ತೆಗಳಿದ್ದರೆ, ಇಂದು ಇದು 2 ಸಾವಿರ ಕಿ.ಮೀ. ಹೆಚ್ಚಿನ ರಸ್ತೆಗಳು ಆಗಿದೆ. ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆಯ ವ್ಯಾಪ್ತಿ 400 ರಿಂದ 500 ಕಿ.ಮೀ.ಗಳಷ್ಟು ಹೆಚ್ಚಿದೆಯೆಂದು ತಿಳಿಸಿದರು.
ಯಡಿಯೂರಪ್ಪ ಅವರು ಮುಖ್ಯ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರತಿ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಯೋಜನೆ ಜಾರಿಗೆ ಬಂದಿದ್ದು, ಇಂದು ಜಿಲ್ಲೆಯ ಗರ್ವಾಲೆ, ಸೂರ್ಲಬ್ಬಿಯಂತಹ ಗ್ರಾಮೀಣ ಭಾಗದ ಕಾಲೋನಿಗಳು ಕಾಂಕ್ರಿಟ್ ರಸ್ತೆಯ ಸಂಪರ್ಕ ಪಡೆದುಕೊಂಡಿರುವುದಾಗಿ ತಿಳಿಸಿ, ಪ್ರಸ್ತುತ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನವನ್ನು ವಿನಿಯೋಗಿಸಲಾಗುತ್ತಿದೆಯೆಂದು ಮಾಹಿತಿಯನ್ನಿತ್ತರು.
ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳ ನಡುವೆಯೂ ರಸ್ತೆಗಳ ಬೇಡಿಕೆಯ ಕೂಗು ಇನ್ನೂ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ಕಳೆದ 2018 ರ ಪ್ರಾಕೃತಿಕ ವಿಕೋಪ ಮತ್ತು ಕೊರೋನಾ ಸಾಂಕ್ರಾಮಿಕದ ಹಿನ್ನೆಲೆ ಆ ಅವಧಿಯಲ್ಲಿ ರಸ್ತೆಯಗಳ ಅಭಿವೃದ್ಧಿಗೆ ಹಣದ ಬಿಡುಗಡೆ ಕಡಿಮೆಯಾಗಿತ್ತು. ಈ ಹಿನ್ನೆಲೆ ಕೆಲಸಗಳು ವಿಳಂಬವಾಗಿದ್ದವು. ಪ್ರಸ್ತುತ ಎಲ್ಲಾ ರಸ್ತೆ ಅಭಿವೃದ್ಧಿ ಕಾರ್ಯಗಳು ಆರಂಭವಾಗಿದೆ. ಇದರ ನಡುವೆ ಕ್ರಷರ್‍ಗಳ ಮುಷ್ಕರ ಒಂದಷ್ಟು ಸಮಸ್ಯೆ ಹುಟ್ಟು ಹಾಕಿದೆಯೆಂದು ತಿಳಿಸಿ, ಕ್ರಷರ್‍ಗಳ ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದರು.
ನೇರ ಬೆಳೆಗಾರರಿಗೆ ಪರಿಹಾರ : ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲೆಯ 50 ಸಾವಿರ ಬೆಳೆಗಾರರಿಗೆ 125 ಕೊಟಿ ರೂ. ಪರಿಹಾರ ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಹಿಂದೊಮ್ಮೆ ರಾಜೀವ್ ಗಾಂಧಿಯವರು, ಡೆಲ್ಲಿಯಿಂದ ಬಿಡುಗಡೆಯಾಗುವ 1 ರೂ. ಅನುದಾನ ಗ್ರಾಮೀಣ ಭಾಗಕ್ಕೆ ಮುಟ್ಟುವಾಗ 20 ಪೈಸೆಯಾಗಿರತ್ತದೆ ಎಂದಿದ್ದರು. ಆದರೆ, ಇಂದು ಒಂದು ಪೈಸೆಯೂ ದುರುಪಯೋಗವಾಗದೆ ಬೆಳೆಗಾರರಿಗೆ ಪರಿಹಾರ ದೊರಕುವಂತಹ ಕಾರ್ಯ ಮೋದಿ ನೇತೃತ್ವದ ಸಕಾರದಿಂದ ನಡೆದಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
‘ಜನರ ಪ್ರಥಮ ಸೇವಕ ನಾನು’ : ಜನರ ಪ್ರಥಮ ಸೇವಕ ತಾನೆಂದು ಹೆಮ್ಮೆಯಿಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದ ಶಾಸಕರು, ಮತ ನೀಡಿ ನಮ್ಮನ್ನು ಆಯ್ಕೆ ಮಾಡುವ ಜನರ ನಿರೀಕ್ಷೆಗಳು ಸಾಕಷ್ಟು ಇದೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ತನ್ನ ಅಧಿಕಾರದ ಅವಧಿಯಲ್ಲಿ ಮಾಡಿಕೊಂಡು ಬಂದಿದ್ದೇನೆಂದು ನುಡಿದರು.
ಬೇಡವೆಂದವನು ನಾನು : ಮಡಿಕೇರಿ ಜಿಲ್ಲಾಧಿಕಾರಿಗಳ ಭವನದ 8 ಕೋಟಿ ವೆಚ್ಚದ ತಡೆಗೋಡೆಯ ನಿರ್ಮಾಣದ ಸಂದರ್ಭ, ನೂತನ ವಿನ್ಯಾಸದ ತಡೆಗೋಡೆ ಇಲ್ಲಿಯ ವಾತಾವರಣಕ್ಕೆ ಸರಿ ಹೊಂದುವುದಿಲ್ಲವೆಂದು ಪದೇ ಪದೇ ಹೇಳುತ್ತಾ ಬಂದವನು ತಾನೆಂದು ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿ, ಇದೀಗ ಬದಲಿ ಕಾಮಗಾರಿ ಹಿಂದಿನ ಮೊತ್ತದಲ್ಲೆ ನಡೆಯಬೇಕೆಂದು ಅಭಿಪ್ರಾಯಿಸಿದರು.
ಕೊಡಗು ಹೆರಿಟೇಜ್ ಸೆಂಟರ್ ನಿರ್ಮಾಣ ಕಾಮಗಾರಿ ಕಳೆದ 13 ವರ್ಷಗಳಿಂದ ಕುಂಟುತ್ತಾ ಸಾಗಿರುವ ವಿಚಾರವನ್ನು ಪ್ರಸ್ತಾಪಿಸಿ, ಈ ಕಾಮಗಾರಿಯ 2.73 ಕೋಟಿ ಮೊತ್ತಕ್ಕೆ ಬಿಲ್ ಆಗಿದ್ದರು ಕಾಮಗಾರಿ ಪೂರ್ಣವಾಗದೆ ಇರುವ ಹಿನ್ನೆಲೆ, ಮೊಟ್ಟ ಮೊದಲ ಬಾರಿಗೆ ಈ ಕಾಮಗಾರಿಯ ಗುತ್ತಿಗೆದಾರನನ್ನು ‘ಕಪ್ಪು ಪಟ್ಟಿಗೆ’ ಸೇರಿಸಿರುವುದಾಗಿ ಶಾಸಕರು ಸ್ಪಷ್ಟಪಡಿಸಿದರು.
ಫೆಬ್ರವರಿಯಲ್ಲಿ ಮಡಿಕೇರಿಯ ನೂತನ ಆಸ್ಪತ್ರೆ ಉದ್ಘಾಟನೆ : ಮಡಿಕೇರಿಯ ಜಿಲ್ಲಾ ಆಸ್ಪತ್ರೆಯ ಸಮೀಪದಲ್ಲೆ ನಿರ್ಮಾಣವಾಗುತ್ತಿರುವ ನುತನ ಆಸ್ಪತ್ರೆ ಕಟ್ಟದ ಫೆಬ್ರವರಿಯಲ್ಲಿ ಮುಖ್ಯ ಮಂತ್ರಿಗಳಿಂದ ಉದ್ಘಾಟನೆಯಾಗಲಿದೆ ಎನ್ನುವ ವಿಶ್ವಾಸವನ್ನು ಇದೇ ಸಂದರ್ಭ ವ್ಯಕ್ತಪಡಿಸಿದರು.
ಸೂಪರ್ ಸ್ಪಷಾಲಿಟಿ ಆಸ್ಪತ್ರೆ : ಮಡಿಕೇರಿಯಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆನ್ನುವ ಕೂಗಿದೆ. ಇದಕ್ಕೆ ಸಂಬಂಧ ಪಟ್ಟ ಕಡತಗಳನ್ನು ಮುಖ್ಯ ಮಂತ್ರಿಗಳ ಅವಗಾಹನೆಗೆ ತಂದಿರುವುದಾಗಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಮುಂಬರುವ ದಿನಗಳಲ್ಲಿ ಕುಶಾಲನಗರ ಬಳಿಯ ಕುಡಿಗೆಯ ಸೈನಿಕ ಶಾಲೆಯ ಬಳಿ ‘ಏರ್ ಸ್ಟ್ರೈಪ್’ ನಿರ್ಮಾಣಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಇರುವುದಾಗಿ ಶಾಸಕರು ತಿಳಿಸಿದರು
ಎರಡು ವರ್ಷಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣ : ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಶಾಸಕರ ಗಮನ ಸೆಳೆದಾಗ ಅವರು, ಜಿಲ್ಲೆಯಲ್ಲಿ ತೇಗ ಸೇರಿದಂತೆ ಮ್ಯಾಂಜಿಯಂನಂತಹ ಏಕರೂಪದ ಮರಗಳ ಅರಣ್ಯ ಇದ್ದು, ಅಲ್ಲಿ ಅಗತ್ಯ ಆಹಾರದ ಕೊರತೆಯಿಂದ ಕಾಡಾನೆಗಳ ಉಪಟಳ ಗ್ರಾಮಿಣ ಭಾಗಗಳಲ್ಲಿ ಕಂಡು ಬರುತ್ತಿದೆ. ಈ ಹಿಂದಿನಿಂದಲು ತಾನು ಪ್ರಾಯೋಗಿಕವಾಗಿ 2 ಸಾವಿರ ಏಕರೆಯಷ್ಟು ತೇಗದ ಅರಣ್ಯದಲ್ಲಿ ಹಲಸು, ಬಿದಿರು ಸೇರಿದತೆ ವನ್ಯ ಜೀವಿಗಳಿಗೆ ಆಹಾರ ಒದಗಿಸುವ ಸಸ್ಯ ಸಂಪತ್ತನ್ನು ಅಭಿವೃದ್ಧಿ ಪಡಿಸಿದಲ್ಲಿ ಕಾಡಾನೆಗಳ ಹಾವಳಿ ಇರುವುದಿಲ್ಲವೆಂದು ಸಲಹೆ ನೀಡುತ್ತಾ ಬಂದಿದ್ದೇನಾದರು, ಆ ಬಗ್ಗೆ ಅರಣ್ಯ ಇಲಾಖೆ ಆಸಕ್ತವಾಗಿಲ್ಲವೆಂದು ಬೇಸರ ವ್ಯಕಪಡಿಸಿದರು.
ಪ್ರಸ್ತುತ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸೋಲಾರ್, ಕಂದಕಗಳನ್ನು ನಿರ್ಮಿಸಲಾಗುತ್ತಿದೆ. ಇದೀಗ ರೈಲ್ವೆ ಕಂಬಿಗಳ ಬೇಲಿ ಅಳವಡಿಕೆಯೂ ನಡೆಯುತ್ತಿದ್ದು, ಕಾಡಾನೆ ಹಾವಳಿ ನಿಯಂತ್ರಣಕ್ಕೆ 100 ಕೋಟಿ ರೂ.ಗಳ ವಿಶೇಷ ಅನುದಾವನ್ನು ಒದಗಿಸಲಾಗಿದ್ದು, ಇದರ ಮೂಲಕ ಕಂದಕ, ರೈಲ್ವೆ ಹಳಿಗಳ ಬೇಲಿ ನಿರ್ಮಾಣವಾಗಲಿದ್ದು, ಮಂದಿನ ಎರಡು ವರ್ಷಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬರುವ ವಿಶ್ವಾಸ ವಕ್ತಪಡಿಸಿದರು.
ಸಿ ಮತ್ತು ಡಿ ಜಾಗ ಹಿಂದಕ್ಕೆ : ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದ 2 ಸಾವಿರ ಹೆಕ್ಟೇರ್ ಸಿ ಮತ್ತು ಡಿ ಭೂಮಿಯನ್ನು ಹಿಂದಕ್ಕೆ ಪಡೆಯುವ ಕೆಲಸವಾಗಿದ್ದು. ಲಭ್ಯ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಕಾರ್ಯ ನಡೆಯಲಿದೆ. ಸಾಕಷ್ಟು ಮಂದಿ ರಸ್ತೆ ಬದಿಗಳಲ್ಲೆ ನಿವೇಶನ ಬೇಕೆನ್ನುವ ಬೇಡಿಕೆ ಇಟ್ಟಲ್ಲಿ ಅದನ್ನು ಮಾಡಲು ಸಾಧ್ಯವೆ ಎಂದು ಪ್ರಶ್ನಸಿ, ಈಗಾಗಲೆ ಜಿಲ್ಲಾಧಿಕಾರಿಗಳು ನಿವೇಶನಗಳನ್ನು ಒದಗಿಸಲು 110 ಏಕರೆ ಸರ್ಕಾರಿ ಪೈಸಾರಿ ಜಾಗವನ್ನು ಗುರುತು ಮಾಡಿರುವುದಾಗಿ ತಿಳಿಸಿದರು.
ಮಾಜಿ ಸೈನಿಕರ ನಿವೇಶನದ ಬೇಡಿಕೆಯನ್ನು ಪ್ರಸ್ತಾಪಿಸಿದಾಗ ಶಾಸಕರು, ಸರ್ಕಾರ ಮಾಜಿ ಸೈನಿಕರಿಗೆ ಹತ್ತು ಹಲವಾರು ಸೌಲಭ್ಯಗಳನ್ನು ಈಗಾಗಲೆ ನೀಡಿದೆ. ಅಗತ್ಯ ಜಾಗ ಮತ್ತು ನಿವೇಶನ ಇರುವವರು ನಿವೇಶನ ಪಡೆಯಲು ಮುಂದಾದಲ್ಲಿ ಅದನ್ನು ಕೊಡುವುದು ಕಷ್ಟವೆಂದು ಸ್ಪಷ್ಟಪಿಸಿದರು.
ಕುಡಿಯುವ ನೀರಿಗೆ 300 ಕೋಟಿ : ಕೇಂದ್ರ ಸರ್ಕಾರ ಈ ಬಾರಿ ಪ್ರತಿ ನಾಗರಿಕನಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಲು ಬಾಬು ಜಗಜೀವನ ರಾಂ ಕುಡಿಯುವ ನೀರಿನ ಯೋಜನೆಯಡಿ 300 ಕೋಟಿ ರೂ.ಗಳನ್ನು ಕೊಡಗಿಗೆ ಒದಗಿಸಿದೆ. ಇದರ ಮೂಲಕ ಪ್ರತಿ ಗ್ರಾಪಂ ಸಾಕಷ್ಟು ಅನುದಾನವನ್ನು ಪಡೆಯಲಿದ್ದು, ಪ್ರತಿಯೊಬ್ಬರಿಗೂ ಕುಡಿಯುವ ಶುದ್ಧ ಕುಡಿಯುವ ನೀರು ದೊರಕಿಸುವ ಪ್ರಯತ್ನ ನಡೆಯಲಿದೆಯೆಂದು ಹೇಳಿದರು.
ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಸಾಕಷ್ಟು ಮಂದಿಗೆ ಉದ್ಯೋಗಾವಕಾಶಗಳು ದೊರಕುತ್ತಿದ್ದು, ಬದುಕಿನ ಮಟ್ಟವೂ ಉತ್ತಮವಾಗಿದೆ. ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರವಾಸಿ ಸ್ಥಳಗಳ ಸಮಗ್ರ ಮಾಹಿತಿ ಒದಗಿಸುವ ‘ಔಟ್ ಲೆಟ್’ ಆರಂಭಿಸುವ ಉದ್ದೇಶವಿದೆಯೆಂದು ತಿಳಿಸಿ, ಪ್ರವಾಸೋದ್ಯಮದೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯೂ ಗಂಭೀರವಾಗಿದ್ದು, ಈ ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆಯೆಂದರು.
5 ವರ್ಷ 2 ಸಾವಿರ ಕೋಟಿ ಅನುದಾನ : ಕೊಡಗು ಜಿಲ್ಲೆಗೆ ಕಳೆದ ಐದು ವರ್ಷಗಳ ಅವಧಿಯಲ್ಲಿ 2 ಸಾವಿರ ಕೋಟಿ ಅನುದಾನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗಿದೆ. ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆಯೆಂದು ಶಾಸಕ ಅಪ್ಪಚ್ಚು ರಂಜನ್ ಇದೇ ಸಂದರ್ಭ ತಿಳಿಸಿದರು.
ಕೊಡಗು ಪತ್ರಕರ್ತರ ಸಮಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, 1994 ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗೆಹರಿಕೆಗೆ ಪ್ರಯತ್ನಗಳನ್ನು ಮಾಡಿದ್ದಾರೆಂದು ಅಭಿಪ್ರಾಯಿಸಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್, ಇಂತಹ ಸಂವಾದ ಕಾರ್ಯಕ್ರಮಗಳು ಮತ್ತಷ್ಟು ನಡೆಯುವಂತಾಗಲಿ. ಇದರಿಂದ ಅಧಿಕಾರದಲ್ಲಿರುವವರ ತಪ್ಪು ಒಪ್ಪುಗಳ ವಿಮರ್ಶೆ ನಡೆಯುವುದಲ್ಲದೆ, ನಡೆದ ತಪ್ಪನ್ನು ಸರಿಪಡಿಸಿಕೊಳ್ಳಲು, ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆಂದು ಅಭಿಪ್ರಾಯಿಸಿದರು.
ಕೊಡಗು ಪತ್ರಕರ್ತರ ಸಂಘದ ಪದಾಧಿಕಾರಿ ತೇಲಪಂಡ ಕವನ್ ಕಾರ್ಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೊಡಗು ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ವಂದಿಸಿದರು.