ವಿರಾಜಪೇಟೆ ಜ.4 : ರಾಜ್ಯ ಸರಕಾರ ಇದೀಗ ಜಾರಿಗೆ ತಂದಿರುವ ಜಿ.ಪಂ. ಕ್ಷೇತ್ರಗಳ ಪುನರ್ ವಿಂಗಡನೆಯಿಂದ ಕೊಡಗು ಜಿಲ್ಲೆಗೆ ಅನ್ಯಾಯವಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಲಿದೆ. ಆದ್ದರಿಂದ ಆಡಳಿತರೂಢ ಪಕ್ಷದ ಜಿಲ್ಲೆಯ ಶಾಸಕರು ಕೂಡಲೇ ಮಧ್ಯ ಪ್ರವೇಶಿಸಿ ಸರಕಾರಕ್ಕೆ ನೈಜತೆಯನ್ನು ಮನವರಿಕೆ ಮಾಡಿಕೊಡಬೇಕು. ಅದರ ಮೂಲಕ ಇದನ್ನು ಜಾರಿಗೊಳಿಸುವ ಸಂದರ್ಭದಲ್ಲಿ ವಿಶೇಷ ಪ್ರಕರಣದಡಿ ವಿನಾಯಿತಿ ಪಡೆಯಬೇಕು ಎಂದು ಕೊಡಗು ಜಿ.ಪಂ. ಮಾಜಿ ಸದಸ್ಯರೂ ಆಗಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಬಿ. ಎನ್. ಪ್ರತ್ಯು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಹೊರಡಿಸಿರುವ ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಪಟ್ಟಿಯಲ್ಲಿ ಈ ಹಿಂದೆ ಇದ್ದ ಒಟ್ಟು 29 ಜಿ.ಪಂ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳು ಕಡಿಮೆಯಾಗಿದೆ. ಇದರಿಂದ ಜಿಲ್ಲೆಯ ಜಿ.ಪಂ ಕ್ಷೇತ್ರ 25ಕ್ಕೆ ಕುಸಿದಿದೆ. ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಇದೊಂದು ಬಹುದೊಡ್ಡ ದುರಂತವಾಗಲಿದೆ. ಕೊಡಗಿಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯಗಳ ಪೈಕಿ ಇದೂ ಒಂದು ಅನ್ಯಾಯವಾಗಿದೆ ಎಂದು ಖಾರವಾಗಿ ಪ್ರತಿಕ್ರಿಸಿದರಲ್ಲದೆ, ಈ ಕುರಿತು ಆಡಳಿತರೂಢ ಬಿಜೆಪಿ ಪಕ್ಷ ತನ್ನ ಸ್ಪಷ್ಟ ನಿಲುವನ್ನು ಕೊಡಗಿನ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ನಡೆದ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲೂ ಕೊಡಗು ಜಿಲ್ಲೆಗೆ ಅನ್ಯಾಯವಾಗಿತ್ತು. ಇದರಿಂದಾಗಿ 3 ವಿಧಾನಸಭಾ ಕ್ಷೇತ್ರವಿದ್ದ ಕೊಡಗಿನಲ್ಲಿ 2 ಕ್ಷೇತ್ರವಾಯಿತು. ಈ ಸಂದರ್ಭದಲ್ಲಿಯೂ ಕೊಡಗಿನಿಂದ ವ್ಯಾಪಕ ಪ್ರತಿರೋಧ ವ್ಯಕ್ತಗೊಳ್ಳಲಿಲ್ಲ. ಅಂದು ವಿಶೇಷ ಪ್ರಕರಣದಡಿ ವಿನಾಯಿತಿ ಪಡೆಯುವ ಯಾವ ಪ್ರಯತ್ನವೂ ನಡೆಯಲಿಲ್ಲ. ವಿಧಾನಸಭಾ ಕ್ಷೇತ್ರವೊಂದು ಕಡಿಮೆಯಾಗಿದ್ದು, ಕೊಡಗಿನ ಅಭಿವೃದ್ಧಿಗೆ ಬಹುದೊಡ್ಡ ಹಿನ್ನಡೆಯಾಯಿತು ಎಂದು ವಿವರಿಸಿದ ಬಿ.ಎನ್. ಪ್ರತ್ಯು , ಜನಪ್ರತಿನಿಧಿಗಳ ಇಚ್ಛಾಶಕ್ತಿ, ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಕೊಡಗು ಅಭಿವೃದ್ಧಿಯಲ್ಲಿ ಹಿಂದುಳಿಯುವಂತಾಯಿತು. ಇನ್ನಾದರೂ ಈ ಕುರಿತು ಎಚ್ಚೆತ್ತುಕೊಳ್ಳದಿದ್ದರೆ ಕೊಡಗಿನ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಎಚ್ಚರಿಸಿದರು.
ಜಿ.ಪಂ.ಯಲ್ಲಿ ಸರ್ಕಾರದ ವಿವಿಧ ಯೋಜನೆಯ ಅನುದಾನವನ್ನು ಕ್ಷೇತ್ರವಾರು ಹಂಚಿಕೆ ಮಾಡಲಾಗುತ್ತದೆ. ಕ್ಷೇತ್ರ ಕಡಿಮೆಯಾದಷ್ಟು ಅನುದಾನವು ಕಡಿಮೆಯಾಗಲಿದೆ. ಇದು ಕ್ಷೇತ್ರಗಳ ಅಭಿವೃದ್ಧಿ ಮೇಲೆ ಭಾರಿ ಪರಿಣಾಮ ಬೀರಲಿದೆ. ಆದ್ದರಿಂದ ಈ ಕುರಿತು ಕೊಡಗಿನಿಂದ ಮತ್ತಷ್ಟು ಗಟ್ಟಿ ಧ್ವನಿಗಳು ಮೊಳಗಬೇಕಿದೆ ಎಂದು ಅಭಿಪ್ರಾಯಪಟ್ಟ ಬಿ.ಎನ್. ಪ್ರತ್ಯು , ಜಿ.ಪಂ.ಗೆ ಸರಕಾರದ ಒಟ್ಟು 29 ಇಲಾಖೆಗಳು ಒಳಪಡುತ್ತಿದ್ದು, ಈ ಪೈಕಿ ಬಹುತೇಕ ಇಲಾಖೆಗಳ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹೀಗಾದರೆ ಜಿ.ಪಂ. ಸದಸ್ಯರಿಗೆ ಯಾವುದೇ ಕೆಲಸವಿರುವುದಿಲ್ಲ. ಭವಿಷ್ಯದಲ್ಲಿ ನಾಮಕಾವಸ್ಥೆಗೆ ಮಾತ್ರ ಜಿ.ಪಂ. ಇರುತ್ತದೆ ಎಂದು ಹೇಳಿದರು.
ಜಿ.ಪಂ. ಅನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಶೇ. 70 ರಷ್ಟಿರುವ ಜಿ.ಪಂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಸರಕಾರದ ವಿವಿಧ ಹಣಕಾಸು ಯೋಜನೆಗಳು ರದ್ದುಗೊಂಡಿದೆ. ಜಿ.ಪಂ ಕ್ಷೇತ್ರಗಳಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಅನುದಾನ ಲಭ್ಯವಿಲ್ಲ. ಹಲವು ಸಮಯಗಳಿಂದ ಕುಡಿಯುವ ನೀರಿಗಾಗಿ ತೆರೆದ ಬಾವಿಗಳ ನಿರ್ಮಾಣ ಆಗುತ್ತಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿನ ತೆರೆದ ಬಾವಿಗಳು ಬತ್ತಿಹೋದರೆ ಅದಕ್ಕೆ ಬುಷ್ ಇಳಿಸಲು ಅನುದಾನ ದೊರೆಯುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡಜನರ ಮನೆ ರಿಪೇರಿಗೆ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ವಸತಿ ಯೋಜನೆಗಳೇ ಜಾರಿಯಾಗುತ್ತಿಲ್ಲ. ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯಿಂದ ಯಾವುದೇ ವಿಶೇಷ ಅನುದಾನ ದೊರೆಯುತ್ತಿಲ್ಲ. ಬಯಲು ರಂಗ ಮಂದಿರಗಳ ನಿರ್ಮಾಣವು ದೂರದ ಮಾತಾಗಿದೆ. ಇದರ ಜೊತೆಗೆ ಇದೀಗ ಕ್ಷೇತ್ರ ಕಡಿಮೆಯಾಗಿರುವುದು ಕಾವೇರಿ ತವರಿನ ಜಿಲ್ಲೆಗೆ ಬಿದ್ದ ದೊಡ್ಡ ಹೊಡೆತವಾಗಿದೆ ಎಂದು ಪ್ರತ್ಯು ವಿವರಿಸಿದರು.
ಕೊಡಗಿನ ಜಿ.ಪಂ ಕ್ಷೇತ್ರ ವಿಂಗಡನೆಯನ್ನು ಪುನರ್ ಪರಿಶೀಲಿಸಬೇಕು. ಕೊಡಗು ಜಿಲ್ಲೆಯನ್ನು ಗುಡ್ಡಗಾಡು ಪ್ರದೇಶವೆಂದು ಎಂದು ವಿಶೇಷ ಪ್ರಕರಣದಲ್ಲಿ ಪರಿಗಣಿಸಬೇಕು. ಹಿಮಾಚಲ ಪ್ರದೇಶ ಹಾಗೂ ಈಶಾನ್ಯ ರಾಜ್ಯಗಳಿಗೆ ನೀಡಿದಂತೆ ಕೊಡಗು ಜಿಲ್ಲೆಗೂ ವಿನಾಯಿತಿ ನೀಡಬೇಕು. ಈ ಹಿಂದೆ ಇದ್ದ 29 ಕ್ಷೇತ್ರಕ್ಕಿಂತ ಹೆಚ್ಚುವರಿ ಜಿ.ಪಂ ಕ್ಷೇತ್ರಗಳನ್ನು ಕೊಡಗು ಜಿಲ್ಲೆಗೆ ನೀಡಬೇಕು ಎಂದು ಆಗ್ರಹಿಸಿರುವ ಬಿ.ಎನ್. ಪ್ರತ್ಯು, ಕೊಡಗಿನ ಶಾಸಕರು ಇದನ್ನು ಪಕ್ಷಾತೀತವಾಗಿ ಪರಿಗಣಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದರಿಂದ ಕೊಡಗಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ತಮ್ಮ ಇಚ್ಛಾಸಕ್ತಿ ತೋರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.