ಸಾತೋಡಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಇದು ಸಿರ್ಸಿಯಿಂದ 73 ಕಿಲೋಮೀಟರ್ ದೂರದಲ್ಲಿದೆ. ಯಲ್ಲಾಪುರದಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ಈ ಜಲಪಾತವು ದಾಂಡೇಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವುದಲ್ಲದೆ ದಟ್ಟ ಕಾನನದ ನಡುವೆ ಸೇರಿಕೊಂಡಿದೆ. ಹಲವಾರು ಝರಿಗಳಿಂದ ಸೇರಿದ ನೀರು ಸುಮಾರು 15 ಮೀಟರ್ ಎತ್ತರದಿಂದ ಧುಮುಕುತ್ತದೆ. ನಂತರ ಕೊಡಸಳ್ಳಿ ಜಲಾಶಯದ ಮೂಲಕ ಕಾಳಿ ನದಿಯನ್ನು ಸೇರುತ್ತದೆ. ಯಲ್ಲಾಪುರದಿಂದ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ. ನಷ್ಟು ಮುಂದೆ ಸಾಗಿ ಎಡಕ್ಕೆ (ಕಲಘಟಗಿ, ಹುಬ್ಬಳ್ಳಿಯಿಂದ ಬರುವವರು ಬಲಕ್ಕೆ ತಿರುಗಬೇಕು) ತಿರುಗಿ 25 ಕಿ.ಮೀ. ಸಾಗಿದರೆ ಸಾತೋಡಿ ಜಲಪಾತದ ಪ್ರದೇಶವು ಕಾಣಸಿಗುತ್ತದೆ. ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆದು(ಕೆಲವೊಮ್ಮೆ ಪಡೆಯದೆಯೂ ತೆರಳಬಹುದು) 2 ಕಿ.ಮೀ. ನಷ್ಟು ಕಚ್ಚಾರಸ್ತೆಯಲ್ಲಿ ನಡೆದು ಸಾಗಿದರೆ ಜಲಪಾತದ ಸೌಂದರ್ಯವು ಕಾಣುತ್ತದೆ.
ಉತ್ತರ ಕನ್ನಡ ಜಿಲ್ಲೆ, ಜಲಪಾತಗಳಿಗೆ ತವರು ಮನೆ. ಜಲಪಾತಗಳ ಜಿಲ್ಲೆಯೆಂದೇ ಕೆಲವೊಮ್ಮೆ ಕರೆಸಿಕೊಳ್ಳುವ ಈ ಪ್ರದೇಶ, ಮಳೆಗಾಲದ ದಿನಗಳಲ್ಲಿ ಜಿಲ್ಲೆಯ ಹಳ್ಳಿಗಳತ್ತ ‘ಪಾದಯಾತ್ರೆ’ ಮಾಡಿದರೆ ನಮಗೆ ಕಾಣಿಸುವುದು ಬಹುಪಾಲು ಜಲಪಾತಗಳೇ. ‘ಸಾತೊಡ್ಡಿಯ ಜಲಪಾತ’ವನ್ನು ಕಂಡವರು ಅದನ್ನು ಅಮೆರಿಕದ ಚಿಕ್ಕ ನಯಾಗರ ಜಲಪಾತ ಕ್ಕೆ ಹೋಲಿಸುವುದುಂಟು. ನಿತ್ಯ ಹರಿದ್ವರ್ಣದ ಕಾಡುಗಳು, ಮುಗಿಲೆತ್ತರದ ಬೆಟ್ಟಗಳಲ್ಲಿ ಹುಟ್ಟಿ ಪ್ರಪಾತಕ್ಕೆ ಧುಮುಕುವ ನದಿಗಳ ಜಲಧಾರೆ ನಿಧಾನವಾಗಿ ಪ್ರವಹಿಸುತ್ತಾ ಕಣಿವೆಗಳಲ್ಲಿ ನದಿಯಾಗಿ ಹರಿಯುವ ಪರಿ ಅನನ್ಯ.
ಜಲಪಾತದ ಅಕ್ಕ-ಪಕ್ಕ : ತಂಪಾದ ವಾತಾವರಣ ಹಚ್ಚ ಹಸುರಿನ ವನಸಿರಿ, ಬಣ್ಣಬಣ್ಣದ ವಿದಿಧ ಪ್ರಕಾರದ ಹಕ್ಕಿಗಳ ಚಿಲಿಪಿಲಿ ಕಲರವ, ಬಂಡೆಗಳ ಮೇಲೆ ಮಧ್ಯೆ ಚಿಮ್ಮಿಕೊಂಡು ಕೆಳಗೆ ಹರಿದೋಡುವ ಜಲರಾಶಿ ಕಣ್ಣಿಗೆ ಮುದಕೊಡುತ್ತದೆ. ವರುಷವಿಡೀ ತನ್ನ ವೈಯಾರದಿಂದ ಶೋಭಿಸುವ ಸಾತೊಡ್ಡಿ ಜಲಪಾತ ಮಳೆಗಾಲದ ವೇಳೆ ತನ್ನ ಸೌಂದರ್ಯ ಮತ್ತು ಮೋಹಕತೆಯನ್ನು ಅರೆದು ಹೊಯ್ದಿರುವಂತೆ ಭಾಸವಾಗುತ್ತದೆ. ನಿಸರ್ಗದ ಮಧ್ಯೆ ಹಾಲುನೊರೆಯೋಪಾದಿಯಲ್ಲಿ ದುಮ್ಮಿಕ್ಕುವ ಜಲಪಾತದ ವೈಭವವನ್ನು ಕಾಣಲು ಪ್ರತಿದಿನ ಪ್ರವಾಸಿಕರ ದಂಡೇ ಸೇರಿರುತ್ತದೆ. ಈ ಜಲಧಾರೆಯ ಉಗಮ ಕಾಳಿನದಿಯ ಉಪನದಿಯಾದ ‘ಸೂರಬ್ಬಿ ಹಳ್ಳ”ದಿಂದಾಗಿದೆಯೆಂಬುದು ತಿಳಿದುಬರುವ ಸಂಗತಿ. ಸುಮಾರು ೫೦ ಅಡಿ ಎತ್ತರದಿಂದ ವಿಶಾಲವಾಗಿ ಕೆಳಗೆ ಧುಮುಕುತ್ತಾ ಝೇಂಕಾರಮಾಡಿ ಹರಿಯುವ ನದಿ ಪರ್ಯಟಕರನ್ನು ಮರುಳುಮಾಡುತ್ತದೆ.
ಜಲಪಾತ ತಲುಪಲು : ಯಲ್ಲಾಪುರದಿಂದ, ಸುಮಾರು ೨೦ ಕಿ.ಮೀ.ದೂರ ಸಾಗಲು,(ಆನಗೋಡ, ದೇಹಳ್ಳಿ, ಮಾರ್ಗದಲ್ಲಿ ಕ್ರಮಿಸಬೇಕು) ಸರಕಾರಿ ಬಸ್ಸುಗಳಿವೆ. ಆದರೆ ಅವುಗಳ ಸಂಖ್ಯೆ ಅತಿ ಕಡಿಮೆ. ಮಳೆಗಾಲದಲ್ಲಿ ಕೊನೆಯ ೮-೧೦ ಕಿ.ಮೀ.ದೂರದ ದಾರಿಯನ್ನು ಪಾದಯಾತ್ರೆ ಮಾಡಿ ಮುಟ್ಟುವುದು ಅನಿವಾರ್ಯವಾಗುತ್ತದೆ. ಸ್ವಂತ ವಾಹನ ವ್ಯವಸ್ಥೆಯಲ್ಲಿ ದಾರಿಯಲ್ಲಿ ಹೋಗುವಾಗ ಬಲಿತ ಭಾರಿ ಗಾತ್ರದ ಮರಗಳನ್ನು ನೋಡಬಹುದು. ಪರ್ವತಗಳು ಹಚ್ಚಹಸುರಿನಿಂದ ಆವೃತವಾಗಿರುವ ದೃಶ್ಯ ಕಣ್ಣಿಗೆ ಮುದಕೊಡುತ್ತದೆ. ಅಂಕುಡೊಂಕಾದ ರಸ್ತೆಯಲ್ಲಿ ಹೋಗುವುದು ಮನಸ್ಸಿಗೆ ಮುದಕೊಟ್ಟರೆ, ಅಲ್ಲಿನ ವನಸಂಪತ್ತನ್ನು ಫೋಟೋ ಕಣ್ಣುಗಳಿಂದ ಸೆರೆಹಿಡಿಯುವ ಪರಿ ಅನನ್ಯ.