ಕುಶಾಲನಗರ ಮಾ.28 : ಉನ್ನತ ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬರಿಗೆ ನೀಡುವ ಉದ್ದೇಶದೊಂದಿಗೆ ರಾಜ್ಯದಲ್ಲಿ 9 ನೂತನ ವಿಶ್ವವಿದ್ಯಾಲಯಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಬೆಂಗಳೂರಿನ ಜ್ಞಾನ ಜ್ಯೊತಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನೂತನ ವಿಶ್ವವಿದ್ಯಾಯಾಲಯಗಳಿಗೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.
ಅಭಿವೃದ್ಧಿ ಮತ್ತು ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಹೆಚ್ಚುವರಿ ವಿಶ್ವ ವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ್ , ಪ್ರತಿ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಸ್ಥಾಪನೆ ಸರಕಾರದ ಚಿಂತನೆಯಾಗಿದ್ದು, ಶೈಕ್ಷಣಿಕ ಅಸಮತೋಲನ ನಿರ್ಮೂಲನೆ ಮಾಡುವುದು ಸರಕಾರದ ಉದ್ದೇಶವಾಗಿದೆ ಎಂದರು.
ಈ ಮೂಲಕ ಕೊಡಗು ಜಿಲ್ಲೆಯ ಬಹುಕಾಲದ ಕನಸಾದ ಕೊಡಗು ವಿಶ್ವವಿದ್ಯಾಲಯದ ಸರ್ವತೋಮುಖ ಶೈಕ್ಷಣಿಕ ಅಭಿವೃದ್ದಿಗೆ ಶುಭ ಹರಸಿದರು.
ಇದೇ ಸಂದರ್ಭ ಅಳುವಾರ ಕೊಡಗು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನೂತನ ಕುಲಪತಿಗಳಾದ ಪ್ರೋ ಅಶೋಕ ಸಂಗಪ್ಪ ಆಲೂರ ಮಾತನಾಡಿ, ಕೊಡಗು ವಿಶ್ವವಿದ್ಯಾಲಯವನ್ನು ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡುವ ಭರವಸೆ ವ್ಯಕ್ತಪಡಿಸಿದರು.
ಶಿಕ್ಷಣದಲ್ಲಿ ಹೆಚ್ಚಿನ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು, ಸರಕಾರದ ಸಹಾಯ ಮತ್ತು ಜನಪ್ರತಿನಿಧಿಗಳ ನೆರವಿನೊಂದಿಗೆ ಮೂಲಸೌಕರ್ಯವನ್ನು ಅಭಿವೃದ್ಧಿ ಪಡಿಸುವ ಭರವಸೆ ವ್ಯಕ್ತಪಡಿಸಿದರು.
ಸಂಸ್ಥೆಯಲ್ಲಿ ಹೆಚ್ಚಿನ ಸಂಶೋಧನೆಯನ್ನು ಮಾಡಲು ಸರಕಾರದ ಅನುದಾನ ಪಡೆಯುವುದು, ಸಂಘ ಸಂಸ್ಥೆಗಳ ಸಹಾಯ ಪಡೆಯುವ ಮೂಲಕ ವಿಶ್ವವಿದ್ಯಾಲಯದ ಉನ್ನತೀಕರಣ ಸಾದ್ಯ ಎಂದರು. ಸಮಯದ ಪರಿಪಾಲನೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.
ತನ್ನ ಅಧಿಕಾರ ಅವಧಿಯಲ್ಲಿ ಯಾವುದೇ ರೀತಿಯ ಬೇದಭಾವ ಮಾಡದೆ ಎಲ್ಲರೂ ಒಂದೇ ಎಂದು ಜವಾಬ್ದಾರಿ ನಿಭಾಯಿಸುವುದಾಗಿ ಹೇಳಿದರು.
ಸ್ನಾತಕೋತ್ತರ ಕೇಂದ್ರದ ನಿರ್ದೆಶಕರಾಗಿದ್ದ ಪ್ರೋ ಧರ್ಮಪ್ಪ ಮಾತನಾಡಿ, ಹಲವು ವರ್ಷಗಳಿಂದ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಸರ್ವರಿಗೂ ಕೃತಜ್ಷತೆ ಸಲ್ಲಿಸಿದರು.
ಇದೇ ಸಂದರ್ಭ ನೂತನ ಕುಲಪತಿಗಳಿಗೆ ತೊರೆನೂರು ಗ್ರಾಮ ಪಂಚಾಯಿತಿ ಜನಪ್ರತಿನಿದಿಗಳು ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಕೊಡಗು ವಿಶ್ವವಿದ್ಯಾಲಯ ಕಾಲೇಜುಗಳ ಮುಖ್ಯಸ್ಥರು ಉಪನ್ಯಾಸಕ ವರ್ಗ, ಆಡಳಿತ ವರ್ಗ ಉಪಸ್ಥಿತರಿದ್ದರು.
ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪ್ರೋ. ಅಶೋಕ್ ಸಂಗಪ್ಪ ಆಲೂರ ಅವರು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾಲೇಜು ಸೇರಿದಂತೆ ಮಂಗಳೂರು ವಿಶ್ವವಿದ್ಯಾಲದ 24 ಕಾಲೇಜುಗಳು, ಮೈಸೂರು ವಿಶ್ವವಿದ್ಯಾಲಯದ 10 ಕಾಲೇಜುಗಳು ಕೊಡಗು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವನೆಯಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ನೂತನ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಎಲ್ಲಾ ಸಹಕಾರ ನೀಡಲಿದೆ. ಸಂಶೋದನೆಗೆ ಬಾಹ್ಯ ಮೂಲಗಳಿಂದ ಹೆಚ್ಚಿನ ಸಹಾಯ ಪಡೆಯುವ ಆಶಯ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಮತ್ತು ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ವಿದ್ಯಾಲಯದ ಪ್ರಥಮ ಆದ್ಯತೆ ಮತ್ತು ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು.