ಮಡಿಕೇರಿ ಮಾ.31 : ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರ 117ನೇ ಹುಟ್ಟುಹಬ್ಬದ ದಿನವಾದ ಇಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಜನರಲ್ ತಿಮ್ಯಯ್ಯ ಅವರ ಪುತ್ಥಳಿಯನ್ನು ಏರ್‌ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು ಜನರಲ್ ತಿಮ್ಮಯ್ಯ ಅವರು ತಮ್ಮ ಕಾರ್ಯಕ್ಷಮತೆ, ದಕ್ಷತೆಯ ಮೂಲಕ ಸೇನಾ ಕ್ಷೇತ್ರಕ್ಕೆ ಮಾದರಿ ಎನಿಸಿಕೊಂಡಿದ್ದಾರೆ. ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಮಹಾನ್ ಸೇನಾನಿಯ ಪುತ್ತಳಿ ಅನಾವರಣವಾಗಿರುವುದು ಹೆಮ್ಮೆ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಅವರು ನಾಮಫಲಕವನ್ನು ಉದ್ಘಾಟಿಸಿದರು. ಅತಿಥಿಗಳು ನೂತನ ಕಚೇರಿ, ಶಾಲಾ ಕೊಠಡಿ, ವಾಚನಾ ಲಯ, ಕ್ರೀಡಾಕೊಠಡಿಯನ್ನು ಉದ್ಘಾಟಿಸಿದರು.
ಶಾಲಾ ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಯಲ್ಲಿ ಜನರಲ್ ತಿಮ್ಮಯ್ಯನವರ ಪುತ್ಥಳಿ ಸ್ಥಾಪನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಕಾರಣಕರ್ತರಾದ ಶಾಲಾ ಆಡಳಿತ ಮಂಡಳಿ, ದಾನಿಗಳು, ಶಾಲಾ ಸಿಬ್ಬಂದಿ ವರ್ಗದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಮಾತನಾಡಿ, ಜನರಲ್ ತಿಮ್ಮಯ್ಯನವರ ಪುತ್ಥಳಿ ಸ್ಥಾಪನೆ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಲಿದೆ ಎಂದರು.
ಪದ್ಮಶ್ರೀ ಐಮುಡಿಯಂಡ ರಾಣಿಮಾಚಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಯುವ ಸಮೂಹ ಸೇನೆಗೆ ಸೇರ್ಪಡೆಗೊಳ್ಳುವ ಮೂಲಕ ದೇಶ ಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ನಂದಿನೆರವಂಡ ಚೀಯಣ್ಣ, ಸಂಚಾಲಕಿ ಕನ್ನಂಡ ಕವಿತ ಬೊಳ್ಳಪ್ಪ, ನಂದಿನೆರವಂಡ ದಿನೇಶ್, ಕನ್ನಂಡ ಸಂಪತ್, ಮಂಡೀರ ಸದಾ ಮುದ್ದಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಕಾಂಡೇರ ಲಲ್ಲು ಕುಟ್ಟಪ್ಪ, ಮುಕ್ಕಾಟಿರ ಪೊನ್ನಮ್ಮ, ಮೂವೇರ ಜಯರಾಂ, ಚೊಟ್ಟೆಯಂಡ ಸಂಜು ಕಾವೇರಪ್ಪ, ಕಾಳಚಂಡ ಅಪ್ಪಣ್ಣ, ಪುತ್ತರಿರ ಕಾಳಯ್ಯ, ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಾಜಿ ಅಧ್ಯಕ್ಷ ಮೂವೇರ ಸುಬ್ಬಯ್ಯ, ಮಾಜಿ ಕಾರ್ಯಾಧ್ಯಕ್ಷ ಚೋವಂಡ ಕಾಳಪ್ಪ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ : ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸುಮಿತ್ರ ಈರಪ್ಪ ಸ್ವಾಗತಿಸಿದರು. ಬಾಳೆಯಡ ಸವಿತಾ ಪೂವಯ್ಯ, ದಿವ್ಯಾ ಬಿ.ಆರ್. ನಿರೂಪಿಸಿ, ಪ್ರತಿಮಾ ಪಿ.ಎಸ್. ವಂದಿಸಿದರು. ಈ ಸಂದರ್ಭ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.











